ಪತ್ನಿಯ ಬುರ್ಖಾ ಧರಿಸಿ, ವಿಮಾನ ಏರಿದ ಕೊರೊನಾ ಸೋಂಕಿತ..!
ಕೊರೊನಾ ಹಾವಳಿಯ ನಡುವೆ ಎಷ್ಟೇ ಮುಂಜಾಗೃತ ಕ್ರಮಗಳನ್ನ ತೆಗೆದುಕೊಂಡು ವಿಮಾನ ನಿಲ್ದಾಣದ ಸಿಬ್ಬಂದಿ ಹೈ ಅಲರ್ಟ್ ಆಗಿದ್ರೂ ಅವರಿಗೆ ಕೋವಿಡ್ ಸೋಂಕಿತ ಚಳ್ಳೆ ಹಣ್ಣು ತಿನ್ನಿಸಿ ವಿಮಾನ ಏರಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.. ಈತನಿಗೆ ಕೊರೊನಾ ಪಾಸಿಟಿವ್ ಇದ್ದು, ಈತ ತನ್ನ ಹೆಂಡತಿಯ ವೇಷದಲ್ಲಿ ವಿಮಾನ ಏರಿದ್ದಾನೆ. ಇದಕ್ಕಾಗಿ ಹೆಂಡತಿಯ ನಕಲಿ ಗುರುತಿನಿ ಚೀಟಿ ಮತ್ತು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಬಳಸಿದ್ದಾನೆ. ಅಲ್ಲದೆ ತನ್ನ ಮುಖವನ್ನು ಬುರ್ಕಾದಿಂದ ಮುಚ್ಚಿಕೊಂಡಿದ್ದಾನೆ.
ಜಕಾರ್ತಾದಿಂದ ಟೆರ್ನೆಟ್ ನತ್ತ ಪ್ರಯಾಣಿಸುತ್ತಿದ್ದ ವಿಮಾನದ ಸಿಬ್ಬಂದಿಯೊಬ್ಬರು ಆತ ಶೌಚಾಲಯದಲ್ಲಿ ಬಟ್ಟೆ ಬದಲಾಯಿಸುವುದನ್ನು ಗಮನಿಸಿದ್ದಾರೆ. ಬಳಿಕ ೀ ಬಗ್ಗೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಈ ವ್ಯಕ್ತಿ ಹೆಂಡತಿಯ ಹೆಸರಿನಲ್ಲೇ ವಿಮಾನ ಟಿಕೆಟ್ ಖರೀದಿಸಿದ್ದಾನೆ. ಅಲ್ಲದೆ ಇದಕ್ಕಾಗಿ ಆಕೆಯ ಗುರುತಿನ ಚೀಟಿ, ಕೋವಿಡ್ ಪಿಸಿಆರ್ ಪರೀಕ್ಷೆಯ ವರದಿ ಮತ್ತು ಲಸಿಕಾ ಪ್ರಮಾಣ ಪತ್ರವನ್ನು ಕೂಡ ಬಳಸಿದ್ದಾನೆ. ಆತನನ್ನು ವಿಮಾನದಿಂದ ಇಳಿಯುತ್ತಿದ್ದಂತೆ ಬಂಧಿಸಲಾಗಿದೆ ಎಂದು ಟೆರ್ನೆಟ್ ಪೊಲೀಸ್ ಮುಖ್ಯಸ್ಥ ಆದಿತ್ಯ ಲಕ್ಷಿಮದ ಅವರು ತಿಳಿಸಿದ್ದಾರೆ.
ಆರೋಪಿಯನ್ನು ಬಳಿಕ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಆತನನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಆದ್ರೆ ಸೋಂಕು ಬಂದಿದ್ದರೂ ಯಾವ ಕಾರಣಕ್ಕಾಗಿ ಹೆಂಡತಿಯ ನಕಲಿ ಗುರುತು ಚೀಟಿ ಬಳಸಿ ವಿಮಾನ ಏರಿದ್ದ ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ವಿಚಾರಣೆಯ ನಂತರೇ ಗೊತ್ತಾಗಬೇಕಿದೆ.