`ಗಾಂಧಿಯವರನ್ನ ಕೊಂದ ಕೊಲೆಗಡುಕನನ್ನ ಆರಾಧಿಸೋದು ದೇಶದ್ರೋಹಿಗಳು’
ಬೆಂಗಳೂರು : ಮಹಾತ್ಮ ಗಾಂಧೀಜಿ ಅವರನ್ನ ಹತ್ಯೆಗೈದ ಕೊಲೆಗಡುಕನನ್ನ ಆರಾಧಿಸುವುದು ದೇಶದ್ರೋಹಿಗಳು. ಈಗ ದೇಶದಲ್ಲಿ ಅಂತಹವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆಯನ್ನು ಆಯೋಜನೆ ಮಾಡಲಾಯಿತು.
ಈ ವೇಳೆ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಮಹಾತ್ಮಾಗಾಂಧೀಜಿಯವರು ಯಾರನ್ನೂ ಶತ್ರುಗಳು ತಿಳಿದು ಅವರ ವಿರುದ್ಧ ಹೋರಾಡಿದರೋ, ಅವರು ಗಾಂಧೀಜಿಯವರನ್ನು ಹತ್ಯೆಮಾಡಲಿಲ್ಲ.
ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥುರಾಮ್ ಗೋಡ್ಸೆ ಎಂಬ ದೇಶದ್ರೋಹಿ ಗಾಂಧೀಜಿಯವರನ್ನು ಹತ್ಯೆಮಾಡಿದ್ದ ಎಂಬುದನ್ನು ನಾವು ಮರೆಯಬಾರದು. ಈಗ ಕೊಲೆಗಡುಕನನ್ನ ಆರಾಧಿಸುವ ದೇಶದ್ರೋಹಿಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘ಗಾಂಧೀಜಿ ಕಾಂಗ್ರೆಸ್ ನ ನಾಯಕರಾಗಿ ಸ್ವಾತಂತ್ರ್ಯಹೋರಾಟವನ್ನು ಮುನ್ನಡೆಸಿದ್ದರೂ ಅಂತರಂಗದಲ್ಲಿ ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಪ್ರೀತಿ, ಸೋದರತೆ, ಅನುಕಂಪ, ಸತ್ಯ ಮತ್ತು ಅಹಿಂಸೆ ಎಂಬ ಪಂಚ ಸೂತ್ರಗಳ ಮೇಲೆ ಜೀವನ ನಡೆಸಿದ ಗಾಂಧಿ, ಮಹಾನ್ ಸಮಾಜ ಪರಿವರ್ತಕ’.
ಅವನ ಜೀವನ ಮತ್ತು ಸಾಧನೆ ಹೇಗೆ ನಮ್ಮ ಆದರ್ಶಪ್ರಾಯವೋ, ಅದೇ ರೀತಿ ಅವರ ಸಾವು ಕೂಡಾ ನಮಗೆ ಪಾಠವಾಗಿದೆ ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿಯವರು ಕೇವಲ ಸ್ವಾತಂತ್ರ್ಯಕ್ಕಾಗಿ, ಅಸ್ಪೃರ್ಶತೆಯ ನಿವಾರಣೆಗಾಗಿ, ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಮಾತ್ರ ಹೋರಾಡಲಿಲ್ಲ.
ಅವರು ಬಹುಮುಖ್ಯವಾದ ಕೋಮುಸಾಮರಸ್ಯಕ್ಕಾಗಿ ಕೂಡಾ ತನ್ನ ಕೊನೆ ಉಸಿರಿರುವ ತನಕ ಹೋರಾಡಿದರು. ಈ ತನ್ನ ಹೋರಾಟಕ್ಕಾಗಿಯೇ ತನ್ನ ಪ್ರಾಣವನ್ನು ಕಳೆದುಕೊಂಡರು.
ಆದರೆ, ಗಾಂಧೀಜಿ ಅವರು ಯಾವ ಉದ್ದೇಶಕ್ಕಾಗಿ ಹೋರಾಡಿದರೋ, ಆ ಕೋಮುಸೌಹಾರ್ದತೆಯ ಸ್ಥಾಪನೆಯ ಕಾರ್ಯ ಇನ್ನೂ ಅಪೂರ್ಣವಾಗಿಯೇ ಉಳಿದಿದೆ ಎಂದು ಬೇಸರ ಹೊರಹಾಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel