ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ ಖ್ಯಾತ ನಟ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು…
ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಲಯಾಳಂನ ಮತ್ತೋರ್ವ ಖ್ಯಾತ ನಟ ವಿಜಯ್ ಬಾಬು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಏಪ್ರಿಲ್ 22 ರಂದು ಯುವತಿ ನೀಡಿರುವ ದೂರಿನ ಮೇರೆಗೆ ಎರ್ನಾಕುಲಂ ಸೌತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿ ಕೊಚ್ಚಿಯ ಎರ್ನಾಕುಲಂ ಫ್ಲ್ಯಾಟ್‍ನಲ್ಲಿ ವಿಜಯ್ ಬಾಬು ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ನಟ ಮತ್ತು ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವತಿ ಕೋಝಿಕೋಡ್ ನಿವಾಸಿಯಾಗಿದ್ದು, ವಿಜಯ್ ಬಾಬು ವಿರುದ್ಧ ಅತ್ಯಾಚಾರ ಹಾಗೂ ದೈಹಿಕ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದರೂ, ಇದುವರೆಗೂ ಪೊಲೀಸರು ವಿಜಯ್ ಬಾಬುವನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಬದಲಾಗಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ವಿಜಯ್ ಬಾಬು ನಾನೇ ಇಲ್ಲಿ ಸಂತ್ರಸ್ತ, ನನ್ನ ಮಾನಹಾನಿ ಮಾಡಲು ಈ ರೀತಿ ಸುಳ್ಳು ದೂರು ನೀಡಲಾಗಿದೆ, ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ. ಫ್ರೈಡೇ ಫಿಲಂ ಹೌಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಹೊಂದಿರುವ ವಿಜಯ್ ಬಾಬು ಅವರು ನಿರ್ಮಾಪಕರಾಗಿ ಫಿಲಿಪ್ಸ್ ಅಂಡ್ ದಿ ಮಂಕಿ ಪೆನ್ ಮಕ್ಕಳ ಚಿತ್ರಕ್ಕಾಗಿ ಕೇರಳ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.
”ನಾನು ನನ್ನ ಪತ್ನಿ, ತಾಯಿ, ಸೋದರಿ, ಸ್ನೇಹಿತರು ಹಾಗೂ ಆಪ್ತರಿಗೆ ಮಾತ್ರ ಉತ್ತರ ನೀಡುತ್ತೇನೆ, ಆಕೆಯ ದುರುದ್ದೇಶ ಎಂದಿಗೂ ಪೂರ್ಣಗೊಳ್ಳುವುದಿಲ್ಲ. ನಾನೇ ಚಾಟಿಂಗ್ ವಿವರಗಳನ್ನ ಬಹಿರಂಗಪಡಿಸುವೆ ಕಾನೂನು ಹೋರಾಟ ನಡೆಸುವೆ ಎಂದು 45 ವರ್ಷದ ವಿಜಯ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ..