ರಾಜ್ಯ ರಾಜಕೀಯದಲ್ಲಿ ಈಗ ಸಿಎಂ ಬದಲಾವಣೆ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಮುಖಂಡ ಆರ್. ಅಶೋಕ್ ಅವರು ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. ಖರ್ಗೆ ಅವರು ನೀಡಿದ ಸಿಎಂ ಬದಲಾವಣೆ ಪಕ್ಷದ ಹೈಕಮಾಂಡ್ ನಿರ್ಧಾರ, ಇದರ ಬಗ್ಗೆ ಯಾರು ಏನು ಹೇಳೋದಕ್ಕೆ ಸಾಧ್ಯವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಖರ್ಗೆ ಅವರು ಆಕ್ಸಿಡೆಂಟಲ್ ಎಐಸಿಸಿ ಅಧ್ಯಕ್ಷ ಎಂದು ಮಾತಿನ ಪ್ರಹಾರ ನಡೆಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಖರ್ಗೆ ಅವರು ಸಮರ್ಥ ನಾಯಕತ್ವದಿಂದ ಅಧ್ಯಕ್ಷರಾಗಿಲ್ಲ. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲ್ಲ, ತೆಗೆದುಕೊಳ್ಳಲಾಗಲ್ಲ. ಪಕ್ಷದೊಳಗೆ ತಾನೇ ಅಧ್ಯಕ್ಷರಾಗಿದ್ದರೂ ಏನೂ ನಿರ್ಧಾರ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಆಕಸ್ಮಿಕ ಎಂದು ಕಟು ಟೀಕೆ ಮಾಡಿದ್ದಾರೆ
ರಾಜ್ಯ ರಾಜಕೀಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಖರ್ಗೆಗೇ ಸ್ಪಷ್ಟತೆಯಿಲ್ಲ. ಹೀಗಿರುವಾಗ ಅವರು ಹೇಗೆ ಎಐಸಿಸಿ ಅಧ್ಯಕ್ಷರಾಗಬಲ್ಲರು? ಅವರನ್ನು ಇಂಥ ಪದವಿಗೆ ತರುವ ಮೂಲಕ ಕಾಂಗ್ರೆಸ್ ಪಕ್ಷವೇ ತಾನು ಎಂತಹ ಸ್ಥಿತಿಯಲ್ಲಿ ಇದೆ ಎಂಬುದನ್ನು ತೋರಿಸಿಕೊಡುತ್ತಿದೆ, ಎಂದು ಅವರು ವ್ಯಂಗ್ಯವಾಡಿದರು.








