ಉತ್ತರಪ್ರದೇಶ : 10 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ಪಾಪಿ
ಉತ್ತರ ಪ್ರದೇಶ: ಉತ್ತರಪ್ರದೇಶದಲ್ಲಿ ಅಪರಾಧಗಳ ಪರ್ವ ಮುಂದುವರೆದಿದೆ.. ಇದೀಗ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದ್ದು ಜನರ ರಕ್ತ ಕುದಿಯುವಂತೆ ಮಾಡಿದೆ.. ಮನೆ ಕೆಲಸದವನೊಬ್ಬ ಕೆಲಸ ಮಾಡಿಕೊಂಡಿದ್ದ ಮನೆಯಲ್ಲಿ 10 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ.. ಅತ್ಯಾಚಾರಕ್ಕೆ ಒಳಗಾದ ಮಗು ಸ್ಥಿತಿ ತೀವ್ರ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ..
ಇಂತಹ ಘಟನೆ ಸಾದತ್ ಗಂಜ್ ಪ್ರದೇಶದಲ್ಲಿ ನಡೆದಿದೆ. ಸದ್ಯ ಮಗುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ದಾಖಲಿಸಲಾಗಿದೆ. ಮಗುವಿನ ಜನನಾಂಗಕ್ಕೆ ತೀವ್ರವಾಗಿ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ತಾಯಿಯು ಅಡುಗೆ ಮನೆಯಲ್ಲಿದ್ದಾಗ ಮಗು ಅಳುವುದು ಕೇಳಿಸಿದೆ. ಕೂಡಲೇ ಬೆಡ್ ರೂಂಗೆ ಬಂದು ನೋಡಿದಾಗ ಮನೆ ಕೆಲಸ ಮಾಡಿಕೊಂಡಿದ್ದ ಸನ್ನಿ ಎಂಬಾತ ಮಗುವಿನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ವೇಳೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಮಗುವಿನ ಕುಟುಂಬದ ದೂರಿನ ಮೇರೆಗೆ ಆರೋಪಿಯನ್ನು ಸೋಮವಾರ ಬಂಧಿಸಲಾಗಿದ್ದು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾದತ್ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಬ್ರಿಜೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಮಗುವಿನ ಜನನಾಂಗಕ್ಕೆ ಹಾನಿಯಾಗಿದ್ದು, ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ. ಆದ್ರೆ ಮೂತ್ರ ಮತ್ತು ಮಲ ವಿಸರ್ಜನೆ ಸಮಯದಲ್ಲಿ ಸ್ವಲ್ಪ ನೋವು ಇರುತ್ತದೆ. ಇದಕ್ಕಾಗಿ ಔಷಧಿ ನೀಡುತ್ತಿದ್ದೇವೆ. ಗುದದ್ವಾರದಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸೋಂಕು ಕಡಿಮೆಯಾದ ಬಳಿಕ ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಪ್ರೊ ಜೆ.ಡಿ. ರಾವತ್ ತಿಳಿಸಿದ್ದಾರೆ.