Mangaluru: PFI ಕಾರ್ಯಕರ್ತರ ಬಿಡುಗಡೆಗೆ ಆಗ್ರಹಿಸಿದ SDPI…
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಎನ್‌ಐಎ ದಾಳಿಯನ್ನ ಕಾನೂನುಬಾಹಿರ ಎಂದು ಬಣ್ಣಿಸಿದೆ ಮತ್ತು ಐವರು ಪಾಪ್ಯುಲರ್ ಫ್ರಂಟ್ ಇಂಡಿಯಾ (ಪಿಎಫ್‌ಐ) ನಾಯಕರನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
ಇಲ್ಲದಿದ್ದರೆ ಪ್ರಜಾಸತ್ತಾತ್ಮಕ ಹೋರಾಟವನ್ನು ಪ್ರಾರಂಭಿಸುವುದಾಗಿ ಅವರು ಎಚ್ಚರಿಸಿದ್ದಾರೆ. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಮಾತನಾಡಿ, “ಪಿಎಫ್‌ಐ ಕಚೇರಿ ಮೇಲೆ ದಾಳಿ ಕುರಿತು ಎನ್‌ಐಎ ಅಧಿಕಾರಿಗಳು ಕೇಳಿದಾಗ ವಾರೆಂಟ್ ತೋರಿಸಿದರು ಆದರೆ ಬಾಗಿಲು ಒಡೆದು ಬಾಗಿಲಿನ ಗಾಜು ಒಡೆದಿದ್ದಾರೆ” ಎಂದು ತಿಳಿಸಿದ್ದಾರೆ.
ಅವರು ನಮ್ಮ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ, ದಾಖಲೆಗಳನ್ನು ದೋಚಿದ್ದಾರೆ. ಪಕ್ಷದ ಕಚೇರಿ ಒಪ್ಪಂದದ ಪ್ರತಿ, ಎಸ್‌ಡಿಪಿಐ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ವಿವರಗಳು, ಫೋಟೋ ಆಲ್ಬಮ್, ಲ್ಯಾಪ್‌ಟಾಪ್ ಮತ್ತು ಎರಡು ಹಾರ್ಡ್ ಡಿಸ್ಕ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಪಕ್ಷಕ್ಕೆ ಸಂಬಂಧಿಸಿದ ಬುಕ್‌ಲೆಟ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ಅಕ್ರಮ ಪ್ರವೇಶದ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ನಾವು ಕಾನೂನು ಸಹಾಯವನ್ನು ಕೋರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಎನ್‌ಐಎ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ ಅವರು ಎಸ್‌ಡಿಪಿಐ ವೇಗದ ಬೆಳವಣಿಗೆಯನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಅವರದೇ ಪಕ್ಷದ ಕಾರ್ಯಕರ್ತರು ಬಂಡಾಯವೆದ್ದಿದ್ದಾರೆ. ಆದ್ದರಿಂದ ತಮ್ಮ ಪಕ್ಷದ ಕಾರ್ಯಕರ್ತರನ್ನು ತೃಪ್ತಿಪಡಿಸಲು ಎನ್‌ಐಎ ಮತ್ತು ಇಡಿ ಎಸ್‌ಡಿಪಿಐ ಮೇಲೆ ದಾಳಿ ನಡೆಸುತ್ತಿವೆ ಮತ್ತು ವಿರೋಧ ಪಕ್ಷಗಳನ್ನು ಗುರಿಯಾಗಿಸುತ್ತಿವೆ ಎಂದಿದ್ದಾರೆ.