ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅನಾರೋಗ್ಯದಿಂದ ನಿಧನ…
ಕನ್ನಡ ಸಿನಿಮಾ ಮತ್ತು ಕಿರುತೆರೆಯ ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅವರು ಅನಾರೋಗ್ಯದಿಂದಾಗಿ ಬುಧವಾರ ನಿಧನರಾಗಿದ್ದಾರೆ. ಮನೋರಂಜನ್ ಪ್ರಭಾಕರ್ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂಗೀತ ಕುಟುಂಬದಿಂದಲೇ ಬೆಳೆದು ಬಂದಿದ್ದ ಮನೋರಂಜನ್ ತಂದೆ ಪಂಡಿತ್ ಬಿ.ಎನ್.ಪಾರ್ಥಸಾರಥಿ ನಾಯ್ಡು ಕೂಡ ಸಂಗೀತದಲ್ಲಿ ಪಾಂಡಿತ್ಯ ಹೊಂದಿದ್ದರು. 70ರ ದಶಕದಲ್ಲಿ ತಂದೆಯಂತೆಯೇ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಇವರು ಎಂಟು ನೂರಕ್ಕೂ ಹೆಚ್ಚು ಸಂಗೀತದ ಆಲ್ಬಂ ಹೊರ ತಂದಿದ್ದಾರೆ. ಇದಲ್ಲದೇ ಮನೋರಂಜನ್ ಹೆಸರಿನ ತಂಡವನ್ನು ಕಟ್ಟಿಕೊಂಡು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಹಲವು ಧಾರಾವಾಹಿಗಳ ಶೀರ್ಷಿಕೆ ಗೀತೆಗಳಿಗೆ ಸಂಗೀತ ನೀಡಿರುವ ಮನೋರಂಜನ್ ಅವರು ಕೆಲಕಾಲ ಆದರ್ಶ ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್ ಅಕಾಡೆಮಿ ಪ್ರಾರಂಭಿಸಿ ಸಂಗೀತ ಆಕಾಂಕ್ಷಿಗಳಿಗೆ ತರಬೇತಿ ನೀಡಿದ್ದಾರೆ.
Manoranjan Prabhakar: Music director Manoranjan Prabhakar passed away due to illness.