ಇಂದಿನ ದಿನಗಳಲ್ಲಿ ಭಾರತೀಯ ಸಿನಿಮಾಗಳಿಗೆ ಜಾಗತಿಕ ಮಟ್ಟದಲ್ಲಿ ಗೌರವ ಸಿಗುತ್ತಿದೆ. ಹೀಗಾಗಿ ಭಾರತೀಯ ಸಿನಿಮಾಗಳು ಆಸ್ಕರ್ ಪ್ರಶಸ್ತಿಯ ಸುತ್ತಿಗೂ ತೆರಳುತ್ತಿವೆ. ಹೀಗಾಗಿ ಭಾರತೀಯ ಚಿತ್ರರಂಗದ ತಾರೆಯರು ಜಾಗತಿಕ ಮಟ್ಟದಲ್ಲಿಯೂ ಸದ್ದು ಮಾಡುತ್ತಿದ್ದಾರೆ.
ಹೀಗಾಗಿಯೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ (Academy Awards) ಕಮಿಟಿಯ ಸದಸ್ಯತ್ವಗಳಲ್ಲಿ ಕೂಡ ಭಾರತೀಯರು ಹೆಸರು ಪಡೆದಿದ್ದಾರೆ. ಆರ್ಆರ್ಆರ್ ಸಿನಿಮಾದಿಂದ ಆಸ್ಕರ್ ವೇದಿಕೆಯಲ್ಲಿ ಮಿಂಚಿದ ಜೂನಿಯರ್ ಎನ್ಟಿಆರ್ (Jr NTR), ರಾಮ್ ಚರಣ್ ಸೇರಿದಂತೆ ಹಲವರಿಗೆ ಈ ಸದಸ್ಯತ್ವ ಸಿಗುತ್ತಿದೆ. ನಿರ್ದೇಶಕ ಕರಣ್ ಜೋಹರ್ (Karan Johar), ಮಣಿರತ್ನಂ ಅವರಿಗೂ ಈ ಆಫರ್ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಆಸ್ಕರ್ ಸಮಿತಿಯಲ್ಲಿ ಈಗಾಗಲೇ 10 ಸಾವಿರ ಸದಸ್ಯರು ಇದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳ ವಿವಿಧ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಈ ಸಮಿತಿಯಲ್ಲಿದ್ದಾರೆ. ಪ್ರತಿ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗುವ ಸಿನಿಮಾ ಮತ್ತು ಸೆಲೆಬ್ರಿಟಿಗಳಿಗೆ ಈ ಸದಸ್ಯರು ವೋಟ್ ಮಾಡುತ್ತಾರೆ. ಆ ಮೂಲಕ ಯಾರಿಗೆ ಪ್ರಶಸ್ತಿ ನೀಡಬೇಕು ಎಂಬುವುದು ನಿರ್ಧಾರವಾಗುತ್ತದೆ. ಆಸ್ಕರ್ ಸದಸ್ಯತ್ವ ಇರುವ ಕೆಲವೇ ಭಾರತೀಯರ ಪಟ್ಟಿಗೆ ಈಗ ರಾಮ್ ಚರಣ್, ಕರಣ್ ಜೋಹರ್, ಜೂನಿಯರ್ ಎನ್ಟಿಆರ್ ಸೇರಿದಂತೆ ಇನ್ನೂ ಕೆಲವರು ಸೇರಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಚಂದ್ರ ಬೋಸ್ ಅವರು ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಅವರು ಕೂಡ ಸ್ಥಾನ ಪಡೆದಿದ್ದಾರೆ.








