ಯಡಿಯೂರಪ್ಪ ಕಾಲ ಮುಗೀತು ಅಂದುಕೊಂಡವರು ಮರೆತಿರುವ ಸಂಗತಿಗಳಿವು; ಪಿಚ್ಚರ್‌ ಅಭಿ ಬಾಕಿ ಹೈ: (ಭಾಗ-೧)

1 min read
Political footprint of leader Bukkanakere Yeddyurappa

ಯಡಿಯೂರಪ್ಪ ಕಾಲ ಮುಗೀತು ಅಂದುಕೊಂಡವರು ಮರೆತಿರುವ ಸಂಗತಿಗಳಿವು; ಪಿಚ್ಚರ್‌ ಅಭಿ ಬಾಕಿ ಹೈ: (ಭಾಗ-೧) Marjala manthana yediyurappa political

ಸದ್ಯ ಪ್ರಕೃತಿ ಪ್ರಶಾಂತವಾಗಿದೆ. ವಾತಾವರಣ ಹಿತವಾಗಿದೆ. ಒಂದು ನಿರಮ್ಮಳ ಮೌನ ಸ್ಥಾಪನೆಯಾಗಿದೆ. ಇದು ಪ್ರಳಯಕ್ಕೂ ಮುಂಚಿನ ಸ್ಥಿತಿ; ಮುಂದೊಂದು ದೊಡ್ಡ ಅವಘಡವಾಗಬಹುದೆನ್ನುವ ಮುನ್ಸೂಚನೆ. ಕರ್ನಾಟಕದ ಪರಮ ದೈತ್ಯ, ಮಹಾಪ್ರಭಾವಿ ಜನನಾಯಕ ಬಿ.ಎಸ್‌ ಯಡಿಯೂರಪ್ಪನವರ ಮಹಾಮೌನ ಇಂತದ್ದೇನನ್ನೋ ಸೂಚಿಸುವಂತಿದೆ. ಹೈಕಮಾಂಡ್‌ನ ಹಲವು ರಾಜೀಸೂತ್ರಗಳಿಗೂ ಮಣಿಯದೆ ಬಿಗಿಪಟ್ಟು ಹಿಡಿದು ಕೂತಿದ್ದ ಬಿಎಸ್‌ವೈ ಇದ್ದಕ್ಕಿದ್ದ ಹಾಗೆ, ಸರ್ಕಾರ ಎರಡು ವರ್ಷ ತುಂಬಿದ ಸಂಭ್ರಮ ಸಭೆಯಲ್ಲಿ ಪದತ್ಯಾಗದ ಘೋಷಣೆ ಮಾಡಿ ಇಡೀ ರಾಜ್ಯವನ್ನೇ ಆಶ್ಚರ್ಯದ ಕಡಲಿನಲ್ಲಿ ಮುಳುಗಿಸಿದರಲ್ಲ, ಅಲ್ಲಿಂದೀಚೆಗೆ ಒಂದೇ ಒಂದು ಅನುಮಾನಸ್ಪಾದ ನಡೆ ದಾಖಲಿಸಿಲ್ಲ. ಒಂದೇ ಒಂದು ಹೇಳಿಕೆ ನೀಡಿಲ್ಲ. ತಮ್ಮ ಮುಂದಿನ ಭವಿಷ್ಯದ ಬಗ್ಗೆ ಒಂದೇ ಒಂದು ಚಕಾರವೆತ್ತಿಲ್ಲ; ಬಿಜೆಪಿಯ ಎಲ್ಲಾ ಹಿರಿತನದ ಸ್ಥಾನಮಾನಗಳನ್ನು ನಿರಾಕರಿಸಿದ್ದಾರೆ. ನಮ್ಮ ಘಟಾನುಘಟಿ ರಾಜಕೀಯ ಪಂಡಿತರಿಗೆ ರಾಜಾಹುಲಿಯ ಗಮನ ಎತ್ತ ಕಡೆಗಿದೆ ಅನ್ನುವ ಕಿಂಚಿತ್‌ ಸುಳಿವೂ ಸಿಗುತ್ತಿಲ್ಲ.
basanagouda-patil-yatnal
ತಾವೇ ಮುಖ್ಯಮಂತ್ರಿ ಪದಕ್ಕೆ ಸೂಚಿಸಿದ ಪರಮಾಪ್ತ ಶಿಷ್ಯ ಬಸವರಾಜ್‌ ಬೊಮ್ಮಾಯಿ, ಸರ್ಕಾರದಲ್ಲಿ ಸಂಪುಟ ದರ್ಜೆ ಸ್ಥಾನ ಮಾನ ಕೊಟ್ಟಾಗಲೂ ನಯವಾಗಿ ನಿರಾಕರಿಸಿದರಲ್ಲ, ಅವರ ಅಂದಿನ ವರ್ತನೆಯಲ್ಲೂ ಅನುಮಾನದ ಅಡ್ಡವಾಸನೆ ಬರಲಿಲ್ಲ. ಇದ್ಯಾವ ಸ್ಮಷಾನ ವೈರಾಗ್ಯ? ಬದುಕಿನ ಇಳಿ ಸಂಧ್ಯಾಕಾಲ ಅವರ ಎನರ್ಜಿ ಕುಗ್ಗಿಸಿದೆ ಅನ್ನುವ ಮಾತುಗಳನ್ನು ಅವರನ್ನು ಬಲ್ಲವರು ಆಡುತ್ತಿದ್ದಾರೆ. ಕಿವಿ ಮಂದವಾಗಿದೆ ಆದರೆ ಅವರ ಸ್ಮರಣ ಶಕ್ತಿ ಈಗಲೂ ಅಗಾಧ! ಯಡ್ಯೂರಪ್ಪ ಸ್ನೇಹವನ್ನಾದರೂ ಮರೆಯಬಹುದು ವೈಷಮ್ಯವನ್ನಲ್ಲ. ಜಿದ್ದಿಗೆ ಬಿದ್ದರೆ ಹಠಕಟ್ಟಿ ಶತ್ರುವನ್ನು ಪಾತಾಳಕ್ಕೆ ತುಳಿಯುವ ತನಕ ವಿಶ್ರಮಿಸದ ಛಲಗಾತರಿಕೆ ಅವರದ್ದು. ಹಾಗಿದ್ದರೆ ಎದುರಾಳಿಗಳ ಎದೆಗುಂಡಿಗೆ ಬಡಿತ ದುಪ್ಪಟ್ಟು ಮಾಡುವಂತೆ ರಣತಂತ್ರ ಹಣೆಯುತ್ತಿದ್ದ ರಣಬೇಟೆಗಾರ ರಾಜುಹುಲಿಗೆ ಏನಾಗಿದೆ ಈಗ?
Marjala manthana yediyurappa political

ಬೆಳಗಾವಿಯ ಸಾಹುಕಾರ ಎಂಡ್‌ ಟೀಂ ಅತೃಪ್ತ ಶಾಸಕರ ಪಡೆಗೆ ಸುಪಾರಿ ಕೊಟ್ಟು ಮೈತ್ರಿ ಸರ್ಕಾರವನ್ನು ಕೆಡವಿ, ಯಡ್ಯೂರಪ್ಪ ಪಟ್ಟಕ್ಕೆ ಬಂದ ದಿನದಿಂದಲೂ ಯಡಿಯೂರಪ್ಪ ಅನುಭವಿಸಿದ ಚಿತ್ರ ಹಿಂಸೆ ಒಂದೆರಡಲ್ಲ. ಅದು ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮರಣಸ್ವರೂಪಿ ಜಲಪ್ರಳಯ ಸಂಭವಿಸಿದ ದುರಿತ ಕಾಲ. ಆ ಸಂಕಷ್ಟದ ಸಂದರ್ಭದಲ್ಲಿಯೂ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡದೆ ಹೈಕಮಾಂಡ್‌ ಉಪದ್ರವ ಕೊಟ್ಟಿತು. ಕನಿಷ್ಟ ಉಸ್ತುವಾರಿ ಸಚಿವರೂ ಇಲ್ಲದೇ ಒಬ್ಬಂಟಿಯಾಗಿ ಪ್ರವಾಹ ಸಮೀಕ್ಷೆ ನಡೆಸಿದರು ವಯೋವೃದ್ಧ ಯಡಿಯೂರಪ್ಪ. ಆಗಲೇ ಹೈಕಮಾಂಡ್‌ ಆರ್‌.ಎಸ್‌.ಎಸ್‌ನ ಬ್ರಾಹ್ಮಣ ಬಿ.ಎಲ್‌. ಸಂತೋಷ್‌ ಎಂಬ ಪರ್ಯಾಯ ನಾಯಕನನ್ನು ಹುಟ್ಟುಹಾಕಿತ್ತಲ್ಲ, ಯಡಿಯೂರಪ್ಪನವರ ಪಾಳೆಯದ ಕೆಲವರೇ ಸಂತೋಷ್‌ಜಿ ಜಿ.. ಜಿ.. ಜಿ.. ಅಂತ, ಪಂಚೆಯ ಚುಂಗು ಹಿಡಿದು ಸುತ್ತತೊಡಗಿದ್ದರು. ಬಿಜೆಪಿಯೊಳಗೆ ಯಡಿಯೂರಪ್ಪ ತಲೆಕಂಡರಾಗದವರಿಗೆ ಮಂತ್ರಿಸ್ಥಾನ ನೀಡಲಾಯಿತು. ಅವರ ಆಪ್ತರನ್ನು ಅವರಿಂದ ದೂರ ಮಾಡಿದರು. ಸುತ್ತಮುತ್ತ ಹೈಕಮಾಂಡ್‌ ಬಾತ್ಮಿದಾರರನ್ನೇ ನೇಮಿಸಿ ಕೋಟೆ ಕಟ್ಟಿದರು ಅನಾಹುತಕಾರಿ ಮೋ-ಶಾಗಳು.
Karnataka emergency relief

ನಂತರ ಮೂವರು ಡಿಸಿಎಂ ನೇಮಕವಾಯಿತು. ಯಡಿಯೂರಪ್ಪನವರ ಮುಗಿನ ತುದಿಗೆ ತುಪ್ಪ ಸವರಿ ನಿಧಾನ ಸಮಯ ನೋಡಿ ಮೂಗು ಮುರಿಯುವ ತಂತ್ರಗಾರಿಗೆ ಮಾಡಿದ್ದು ಮಾರ್ವಾಡಿ ಅಮಿತ್ ಷಾ; ಯಡಿಯೂರಪ್ಪರನ್ನು ನಿಜಾರ್ಥದಲ್ಲಿ ಅನಾಥ ಶಿಶುವನ್ನಾಗಿಸಿದ್ದು ಅವರದ್ದೇ ಪಕ್ಷದ ದೆಹಲಿ ಸಾಮ್ರಾಟರು. ಕೇಂದ್ರದಲ್ಲಿ ಕೂತಿರುವ ಬಿಜೆಪಿ ಹೈಕಮಾಂಡ್‌ಗೆ ಕೇವಲ ಕರ್ನಾಟಕ ರಾಜ್ಯ ಮಾತ್ರ ಬೇಕಿತ್ತೇ ವಿನಃ, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಲ್ಲ. ಹಾಗಿಲ್ಲವಾದ್ರೆ ಮೂವರು ಡಿಸಿಎಂಗೆ ಹೈಕಮಾಂಡ್‌ನಿಂದ ಅಪ್ಪಣೆ ಹೊರಡುತ್ತಿರಲಿಲ್ಲ. ಗೋವಿಂದ ಕಾರಜೋಳ ಎನ್ನುವ ಹಿಂದುಳಿದ ಸಮುದಾಯದ ಯಡಿಯೂರಪ್ಪನವರ ನಿಷ್ಟ ಅನುಯಾಯಿ ಹೊರತುಪಡಿಸಿ ಉಳಿದಿಬ್ಬರು ಅನರ್ಹರನ್ನು ಡಿಸಿಎಂ ಮಾಡಲಾಯಿತು. ಅಶ್ವಥ್‌ ನಾರಾಯಣ್‌ ಮತ್ತು ಲಕ್ಷ್ಮಣ್‌ ಸವದಿ ಇಬ್ಬರೂ ಕೇಂದ್ರ ನಾಯಕರ ಏಜೆಂಟರಾಗಿ ಡಿಸಿಎಂ ಹುದ್ದೆಯಲ್ಲಿ ಕೂತಿದ್ದರು ಅನ್ನುವುದು ಎಲ್ಲರೂ ಬಲ್ಲ ಸತ್ಯ.

ರಾಜಕೀಯ ಕಾರ್ಯದರ್ಶಿ ಅಂತ ನೇಮಕವಾದವ ವಿಧಾನಸೌಧದ ಮೂರನೆಯ ಮಹಡಿಯ ಅಷ್ಟೂ ಚಲನವಲನಗಳನ್ನು ದೆಹಲಿ ಹೆಡ್‌ಆಫೀಸ್‌ಗೆ ಪ್ರತಿನಿತ್ಯ ರಿಪೋರ್ಟ್‌ ಮಾಡತೊಡಗಿದ. ನೆರೆಪರಿಹಾರದ ಹಣ ಲೆಕ್ಕ ಮಾಡಿ ಪಟ್ಟಿ ಕಳಿಸಿದರೆ, ಸತಾಯಿಸಿ ಸತಾಯಿಸಿ ಕೊನೆಗೆ ಬಿಕ್ಷೆ ಹಾಕಿದಂತೆ ಚೂರೇ ಚೂರು ಅನುದಾನ ನೀಡಿತು ಹೈಕಮಾಂಡ್. ತುಮಕೂರಿಗೆ ಪ್ರಧಾನಿಗಳು ಬಂದಿದ್ದಾಗ, ತೆರೆದ ಸಭೆಯ ಬಹಿರಂಗ ವೇದಿಕೆಯಲ್ಲಿ ಯಡಿಯೂರಪ್ಪನವರು ನೆರೆ ಪರಿಹಾರ ಹಣದ ಪ್ರಸ್ತಾವನೆಯನ್ನು ಪ್ರಧಾನಿಗಳ ಮುಂದಿಟ್ಟಿದ್ದರು. ನೆರೆ ಪರಿಹಾರ ಕಾರ್ಯಾಚರಣೆಗೆ ಹಾಗೂ ಮತ್ತೆ ಮೂಲಸೌಕರ್ಯ ಕಲ್ಪಿಸಲು 5000 ಕೋಟಿ ಅಗತ್ಯವಿದೆ. ಧಾನಿಗಳು ಆರ್ಥಿಕ ಸಹಾಯ ಮಾಡಿ ಎಂದು ಅಂದು ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜೋಳಿಗೆ ಹಿಡಿದು ಬೇಡಿಕೊಂಡಿದ್ದರು. ಹಣಕಾಸಿನ ತಾಪತ್ರಯ ಅಷ್ಟು ಕಾಡಿತ್ತು.

ನಿಮಗೆ ನೆನಪಿದ್ದರೆ, ರಾಜ್ಯಗಳ ಆದಾಯ ಕೊರತೆ ಸರಿದೂಗಿಸಲು ಕೇಂದ್ರ ಸರ್ಕಾರ 14 ರಾಜ್ಯಗಳಿಗೆ 6000 ಕೋಟಿ ಬಿಡುಗಡೆ ಮಾಡಿತ್ತಲ್ಲ; ಕರ್ನಾಟಕ ಈ ಪಟ್ಟಿಯಲ್ಲಿರಲಿಲ್ಲ. ಯಾಕಂದರೆ ಕರ್ನಾಟಕವನ್ನು ಹೈಕಮಾಂಡ್‌ ಮರ್ಜಿಗೆ ವಿರುದ್ಧ ಆಳುತ್ತಿದ್ದಿದ್ದು ಯಡಿಯೂರಪ್ಪ. ತಮ್ಮ ನೆಲೆಯೇ ಇಲ್ಲದ ಕೇರಳಕ್ಕೆ 1276 ಕೋಟಿ, ಆಂಧ್ರಪ್ರದೇಶಕ್ಕೆ 491 ಕೋಟಿ, ಹಿಮಾಚಲ ಪ್ರದೇಶಕ್ಕೆ 952 ಕೋಟಿ ಹಂಚಿಕೆ ಮಾಡಿದ್ದ ಕೇಂದ್ರ, ಅತ್ಯಂತ ಸಂಪದ್ಭರಿತ ರಾಜ್ಯ ಕರ್ನಾಟಕಕ್ಕೆ ಬಿಡಿಗಾಸು ನೀಡಲಿಲ್ಲ. ಕಳೆದ ರಾಜ್ಯ ಸಭೆ ಚುನಾವಣೆಗೆ ಬಿಜೆಪಿಯ ಎರಡೂ ಟಿಕೆಟ್‌ಗಳನ್ನು ಬಿಎಸ್‌ವೈ ಆಪ್ತರ ಕೈತಪ್ಪಿಸಲಾಯಿತು. ಬಿಎಸ್‌ವೈ ಕಳಿಸಿದ್ದ ಶಿಫಾರಸ್ಸನ್ನು ತಿರಸ್ಕರಿಸಿದ ಹೈಕಮಾಂಡ್ ಎರಡು ಸ್ಥಾನಕ್ಕೆ ತನ್ನ ಕ್ಯಾಂಡಿಡೇಟ್‌ ಹಾಕಿತು. ಯಡಿಯೂರಪ್ಪನವರ ರೆಕಮಂಡೇಷನ್ನಿನಲ್ಲಿ ಕತ್ತಿ, ಕೋರೆ, ಶೆಟ್ಟಿ ಹೆಸರಿದ್ದರೆ, ಅದನ್ನು ಡಸ್ಟ್‌ಬಿನ್‌ಗೆ ಎಸೆದು ಅಶೋಕ್‌ ಗಸ್ತಿ, ಈರಣ್ಣ ಕಡಾಡಿ ಹೆಸರು ಫೈನಲ್‌ ಮಾಡಿತು. ಇಂತಹ ಚಿತ್ರಹಿಂಸೆಗಳು ಅದೆಷ್ಟೋ! ಪ್ರತಿ ಹಂತದಲ್ಲೂ ಯಡಿಯೂರಪ್ಪನವರನ್ನು ಮಲತಾಯಿ ಮಗನಂತೆ ಕಂಡಿದ್ದು ಇದೇ ಮೋದಿ ಇದೇ ಷಾ.. ನಂತರ ಕೋವಿಡ್‌ ಲಾಕ್‌ಡೌನ್‌ ಸರಣಿ ಸಂಕಷ್ಟದ ಸಮಯದಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಶೋಚನೀಯವಾದರೂ ಕೇಂದ್ರ ಗಂಜಿಕಾಸನ್ನೂ ಕೊಡಲಿಲ್ಲ. ಆದರೂ ಯಡಿಯೂರಪ್ಪ ತುಟಿ ಎರಡು ಮಾಡಲಿಲ್ಲ. ಈಗ ಸತತ ಪ್ರಯತ್ನಗಳ ನಂತರ ಯಡಿಯೂರಪ್ಪ ಎಂಬ ಮದ್ದಾನೆ ಆಪರೇಷನ್ ಖೆಡ್ಡಾ ಯಶಸ್ವಿಯಾದ ಖುಷಿಯಲ್ಲಿರುವ ಕೇಂದ್ರದ ದೊಡ್ಡಪ್ಪಂದಿರಿಗೆ ಭವಿಷ್ಯದಲ್ಲಿ ಬೀಸಲಿರುವ ಚಂಡಮಾರುತದ ಕಲ್ಪನೆಯೇ ಇಲ್ಲ. ಬಿಎಸ್ವೈ ಬಿಜೆಪಿಗೆ ಅನಿವಾರ್ಯವೇ ಹೊರತು ಬಿಎಸ್ವೈಗೆ ಬಿಜೆಪಿ ಅನಿವಾರ್ಯವಲ್ಲ. ವಯಸ್ಸು ಇನ್ನೊಂದು ಹತ್ತು ವರ್ಷ ಕಡಿಮೆ ಇದ್ದಿದ್ದರೇ ಇದೇ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ಬೇರು ಸಹಿತ ಕೀಳದೇ ಬಿಡುತ್ತಿರಲಿಲ್ಲ ಎಂದು ಮಾತಾಡಿಕೊಳ್ಳುತ್ತದೆ ಕರ್ನಾಟಕ ರಾಜಕಾರಣದ ಥಿಂಕ್‌ ಟ್ಯಾಂಕ್. ಹಾಗಂತ ಯಡಿಯೂರಪ್ಪನವರು ಈಗಲೂ ಸುಮ್ಮನೆ ಕೂತಿಲ್ಲ.

ರಾಜ್ಯ ಬಿಜೆಪಿಯಲ್ಲಿ ಹಲವು ವರ್ಷಗಳಿಂದ ದುಡಿದು ಸಂಘಟನೆ ಕಟ್ಟಿದವರು ಅನೇಕರಿದ್ದಾರೆ. ಜನರ ಮಧ್ಯದಿಂದಲೇ ವಿಧಾನಸೌಧದ ಪಡಸಾಲೆಗೆ ನಡೆದುಬಂದವರಿದ್ದಾರೆ. ಹಳ್ಳಿ ಹಳ್ಳಿಗಳಿಗೂ ಹೋಗಿ ಸಂಘಟನೆ ಕಟ್ಟಿದವರಿದ್ದಾರೆ. ದಿವಂಗತ ಅನಂತ್‌ ಕುಮಾರ್‌, ಬಿ.ಬಿ ಶಿವಪ್ಪ, ಪುತ್ತೂರಿನ ಉರಿಮಜಲು ರಾಮಭಟ್ಟರು, ಕಲ್ಲಡ್ಕ ಪ್ರಭಾಕರ್‌ ಭಟ್ಟ, ಕೆ.ಎಸ್ ಈಶ್ವರಪ್ಪ, ರಾಮಚಂದ್ರೇಗೌಡ, ಬಚ್ಚೇಗೌಡ, ಗೋವಿಂದ ಕಾರಜೋಳ, ಸಿ.ಎಂ ಉದಾಸಿ, ಇತ್ಯಾದಿ ಹೆಸರುಗಳು ಈ ಪಟ್ಟಿಯಲ್ಲಿವೆ. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿ ಇರುವ ಮತ್ತು ಅಧಿಕಾರದಿಂದ ಬೀಳಿಸಬಲ್ಲ ದೊಡ್ಡ ತಾಕತ್ತಿರುವ ನಾಯಕ ಮಾತ್ರ ಸದ್ಯಕ್ಕೆ ಬಿ.ಎಸ್ ಯಡಿಯೂರಪ್ಪ. ಕೇಂದ್ರದಲ್ಲಿ ವಾಜಪೇಯಿ ಹೇಗೆ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿದರೋ ಹಾಗೆಯೇ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಬಿಜೆಪಿಯನ್ನು ಅಡಿಪಾಯದಿಂದ ಕಟ್ಟಿದರು. ವಾಜಪೇಯಿ ಹಾಗೂ ಯಡಿಯೂರಪ್ಪ ಇಬ್ಬರಲ್ಲೂ ಇರುವ ಸಾಮ್ಯತೆ ಎಂದರೆ ಜಾತ್ಯಾತೀತ ಹಾಗೂ ಸಮಸಮಾಜವಾದಿ ವಿಷನ್. ಇಬ್ಬರೂ ದೂರದೃಷ್ಟಿ ಇರುವ ನಾಯಕರು. ದುರದೃಷ್ಟ ಎಂದರೆ ಯಡಿಯೂರಪ್ಪ ಕೆಟ್ಟವರಾಗಿದ್ದು ತಮ್ಮದಲ್ಲದ ಹಾಗೂ ತಮ್ಮ ಸುತ್ತಮುತ್ತಲಿನವರು ಮಾಡಿದ ತಪ್ಪಿಗೆ. ಇದರ ನೆಪ ಲಾಭವಾಗಿಸಿಕೊಂಡಿದ್ದು ಮಾತ್ರ ಮಹಾನುಭಾವರಾದ ಮೋದಿ ಎಂಡ್‌ ಷಾ. ಯಡಿಯೂರಪ್ಪನೆಂಬ ರಾಜಕೀಯದ ಪಳಗಿದ ಚತುರ ಚದುರಂಗಪಟು ತನ್ನ ಹಿಂದಿನ ಸೋಲುಗಳನ್ನು, ಸೋಲಿಸಿದ ಹಿತಶತ್ರುಗಳನ್ನು ಮರೆತಾರೆಯೇ?
Political footprint of leader Bukkanakere Yeddyurappa

ಬಿಜೆಪಿಗೆ ನೆಲೆಯೇ ಇಲ್ಲದ ಸಮಯದಲ್ಲಿ ಬೆರಳೆಣಿಕೆಯ ಕಾರ್ಯಕರ್ತರು ಕೈನಲ್ಲಿ ಕರಪತ್ರಗಳನ್ನು ಹಿಡಿದು ಮನೆ ಮನೆ ಪ್ರಚಾರ ಮಾಡುತ್ತಿದ್ದರಲ್ಲ, ಆಗ ಅವರ ಬಾಯಲ್ಲಿ ಬರುತ್ತಿದ್ದ ಸ್ಲೋಗನ್ ಒಂದೇ “ಯಡಿಯೂರಪ್ಪ ಗುಡುಗಿದ್ರೆ ವಿಧಾನ ಸೌಧ ನಡುಗುವುದು”. ಅಂದಿನಿಂದಲೂ ಇಂದಿನವರೆಗೂ ಈ ರಾಜ್ಯದಲ್ಲಿ ಬಿಜೆಪಿ ಅಸ್ಮಿತೆ ಎಂದರೆ ಅದು ಯಡಿಯೂರಪ್ಪ ಮಾತ್ರ. ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲೆ ಕಮಲ ಅರಳಲು ಕಾರಣ ಆಡ್ವಾಣಿಯ ರಥಯಾತ್ರೆ ಒಂದು ಕಡೆಯಾದ್ರೆ, ಅದನ್ನು ಸಂಘಟನಾ ರೂಪದಲ್ಲಿ ಚಾಲ್ತಿಗೆ ತಂದು ಜನಾಭಿಪ್ರಾಯ ರೂಪಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ಇದೇ ಯಡಿಯೂರಪ್ಪ. ಇವತ್ತು ಹೈಕಮಾಂಡ್ ಅಂತ ಕರೆಸಿಕೊಂಡಿರುವ ಪ್ರಧಾನಿ ಮೋದಿಯಾಗಲೀ, ಚಾಣಾಕ್ಯ ಅಮಿತ್ ಶಾ ಆಗಲೀ ಆಗ ಯಾರೆಂದೇ ಕನ್ನಡಿಗರಿಗೆ ಗೊತ್ತಿರಲಿಲ್ಲ. ಹೀಗಿದ್ದಾಗ ರಾಜ್ಯದ ಜನರ, ಅದರಲ್ಲೂ ಪ್ರಬಲ ಸಮುದಾಯ ವೀರಶೈವ-ಲಿಂಗಾಯಿತರ ನಾಡಿಮಿಡಿತ ಅರಿತ ಯಡಿಯೂರಪ್ಪ ಗುಜರಾತಿಗಳಿಗೆ ಚಳ್ಳೆಹಣ್ಣು ತಿನ್ನಸದೇ ಬಿಟ್ಟಾರೆಯೇ?

ಯಡಿಯೂರಪ್ಪ ವೀರಶೈವ ಲಿಂಗಾಯಿತರ ಪ್ರಶ್ನಾತೀತ ನಾಯಕ ಅನ್ನೋದು ನಿರ್ವಿವಾದಿತ ಸತ್ಯ. ದಾವಣಗೆರೆ ದಾಟಿದ ನಂತರ ಇಡೀ ಉತ್ತರ ಕರ್ನಾಟಕ ಯಡಿಯೂರಪ್ಪನವರ ಪ್ರಭಾವಳಿಗೆ ಉಘೇ ಅನ್ನುತ್ತೆ. ಮಧ್ಯ ಕರ್ನಾಟಕದ ಚಿತ್ರದುರ್ಗ ತುಮಕೂರಿನಲ್ಲೂ ಯಡಿಯೂರಪ್ಪನವರ ಪ್ರಭಾವ ಇದೆ. ಶಿವಮೊಗ್ಗವಂತೂ ಬಿಎಸ್ವೈ ತವರು ಜಿಲ್ಲೆ. ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಯಡಿಯೂರಪ್ಪ ಬರುತ್ತಾರೆಂದರೆ ಮಧ್ಯರಾತ್ರಿಯಲ್ಲೂ ಸಾವಿರ ಮಂದಿ ಕಾಯುತ್ತಾರೆ. ಕರಾವಳಿ ಮಂಗಳೂರಿನಲ್ಲಿಯೂ, ಕೃಷ್ಣನ ನಾಡು ಉಡುಪಿಯಲ್ಲೂ ಅವರ ಮಾತನ್ನು ಶಿರಸಾವಹಿಸಿ ಪಾಲಿಸುವ ದೊಡ್ಡ ಕಾರ್ಯಕರ್ತ ಬಳಗವಿದೆ. ಇದಕ್ಕೆ ಕಾರಣ ಇಡೀ ಕರ್ನಾಟಕವನ್ನು ಸುತ್ತಿ ಅವರು ಪಕ್ಷ ಸಂಘಟಿಸಿದ್ದು. ಕರ್ನಾಟಕದ ಎಲ್ಲಾ ಹಳ್ಳಿಗಳನ್ನು ಸುತ್ತಿರುವ ಕರ್ನಾಟಕದ ಪ್ರಮುಖ ನಾಯಕರೆಂದರೆ ಬಂಗಾರಪ್ಪ, ದೇವೇಗೌಡರು ಮತ್ತು ಯಡಿಯೂರಪ್ಪ.

H D Devegouda saaksha tv
ಎಲ್ಲೋ ಬೂಕನಕೆರೆಯಲ್ಲಿ ಬಾಲ್ಯದಲ್ಲಿ ಲಿಂಬೆಹಣ್ಣು ಮಾರಾಟ ಮಾಡುತ್ತಿದ್ದ ಯಡಿಯೂರಪ್ಪ ಶಿವಮೊಗ್ಗ ಸೇರುವುದು ನಂತರ ಶಿಕಾರಿಪುರವನ್ನು ತಮ್ಮ ರಾಜಕೀಯ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಇವೆಲ್ಲವೂ ಜನರಿಗೆ ತಿಳಿದಿರುವಂತದ್ದೆ. ಆದರೆ ಯಡಿಯೂರಪ್ಪನವರ ಹೋರಾಟದ ರಾಜಕೀಯ ಬೆಳವಣಿಗೆ ಪ್ರಾಯಶಃ ಬಹಳಷ್ಟು ಜನರಿಗೆ ಗೊತ್ತಿಲ್ಲ. ಬಹುಶಃ ರೈತರ ಹಕ್ಕುಗಳಿಗಾಗಿ ಗಟ್ಟಿ ಧ್ವನಿ ಎತ್ತಿದ ಕೆಲವೇ ಜನನಾಯಕರಲ್ಲಿ ಯಡಿಯೂರಪ್ಪ ಅಗ್ರಗಣ್ಯರು. ಗ್ರಾಮಿಣ ರೈತರ ಪರವಾಗಿ ಎರಡು ಬಾರಿ ಪಾದಯಾತ್ರೆ ಮಾಡಿದ ಯಡಿಯೂರಪ್ಪನವರ ಸಿಡಿಸಿಡಿ ಸಿಟ್ಟು ಆಡಳಿತ ಪಕ್ಷಕ್ಕೆ ಅನೇಕ ಬಾರಿ ಬೆವರಿಳಿಸಿದೆ. ಸದನದಲ್ಲಿ ಯಡಿಯೂರಪ್ಪನವರ ರೋಶಾವೇಶದ ಭಾಷಣ, ಇದು ತತಕ್ಷಣ ಜಾರಿಯಾಗಲೇಬೇಕು ಎಂದು ಮೇಜು ಕಟ್ಟಿ ಅಬ್ಬರಿಸುತ್ತಿದ್ದ ಪರಿ ಇವುಗಳೇ ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪನವರನ್ನು ಮಾಸ್ ಲೀಡರ್ ರನ್ನಾಗಿಸಿತು. ಯಡಿಯೂರಪ್ಪನವರನ್ನು ಚೆನ್ನಾಗಿ ಬಲ್ಲವರು ಈ ಮಾತನ್ನು ಖಂಡಿತಾ ಒಪ್ಪುತ್ತಾರೆ, ಅವರು ಕೋಮುವಾದಿಯಲ್ಲ. ಎಲ್ಲಾ ಸಮುದಾಯದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಲ್ಲ ಬಹುತ್ವವಾದಿ ನಾಯಕ. ಬಿಎಸ್ವೈ ಅವರು ಆರ್.ಎಸ್.ಎಸ್ ಹಿನ್ನೆಲೆ ಹೊಂದಿದ್ದರೂ ಹಿಂದುತ್ವದ ಉಗ್ರ ಪ್ರತಿಪಾದಕ ಕರ್ಮಠರಲ್ಲ. ರೈತರ ಕಲ್ಯಾಣಕ್ಕಾಗಿ ಮೊತ್ತ ಮೊದಲ ಕೃಷಿ ಬಜೆಟ್ ಮಂಡಿಸಿದವರು ಅವರು. ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಒಬ್ಬ ಸಾಮಾನ್ಯ ರೈತನ ಮಾತಾಡಿಸಿ, ಅವ ತಮ್ಮ ನಾಯಕ ಎಂದು ಒಪ್ಪಿಕೊಳ್ಳುವುದು ಯಡಿಯೂರಪ್ಪನವರನ್ನೇ ಹೊರತು ಮಣ್ಣಿನ ಮಕ್ಕಳನ್ನೂ ಅಲ್ಲ, ಅಹಿಂದ ನಾಯಕರನ್ನೂ ಅಲ್ಲ ಅಥವಾ ಹಿಂದುತ್ವದ ಹರಿಕಾರರನ್ನೂ ಅಲ್ಲ.

ಯಡಿಯೂರಪ್ಪ ಸ್ವತಂತ್ರ ಜೀವಿ. ತಮಗನ್ನಿಸಿದ್ದನ್ನು ನೇರವಾಗಿ ನಿರ್ಭೀಡೆಯಿಂದ ಹೇಳಬಲ್ಲ ನಿಷ್ಟುರವಾದಿ. ವಾಜಪೇಯಿ ಬದುಕಿದ್ದಾಗಲೂ, ಆಡ್ವಾಣಿ ಅಧಿಪತ್ಯ ಇದ್ದಾಗಲೂ ಯಡಿಯೂರಪ್ಪನವರನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಯಾಕಂದರೆ ಅವರಿಗೆ ಗೊತ್ತಿತ್ತು ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿಯೇ ಇಲ್ಲ. 2013ರ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಯಡಿಯೂರಪ್ಪ ಯಾಕೆ ಅನಿವಾರ್ಯ ಎನ್ನುವುದನ್ನು ಸಾಬೀತು ಮಾಡಿತ್ತು. ತವರು ಜಿಲ್ಲೆಯ ಕೆ.ಎಸ್ ಈಶ್ವರಪ್ಪ ಸಹಿತ ಘಟಾನುಘಟಿಗಳು ಸೋಲಿನ ಕಹಿ ಉಂಡಿದ್ದಕ್ಕೆ ಕಾರಣವೇ ಯಡಿಯೂರಪ್ಪನವರ ಮುನಿಸು. ಉದ್ಯಮಿ ರುದ್ರೇಗೌಡರು ಯಾರೆಂದೇ ಗೊತ್ತಿಲ್ಲದಿದ್ದರೂ ಶಿವಮೊಗ್ಗದ ಜನ ಯಡಿಯೂರಪ್ಪನವರನ್ನು ನಂಬಿ ಮತ ಹಾಕಿದ್ದರು. ಯಾರಿಗಾದರೂ ಆ ಸಂದರ್ಭದಲ್ಲಿ ಯಡಿಯೂರಪ್ಪನವರ ಭಾಷಣ ನೆನಪಿದ್ದರೆ ಅವರ ಈ ಮಾತೂ ನೆನಪಿರುತ್ತದೆ. ಈ ಚುನಾವಣೆಯಲ್ಲಿ ಈಶ್ವರಪ್ಪ ಮೂರನೆಯ ಸ್ಥಾನಕ್ಕೆ ಇಳಿಯದಿದ್ರೆ ನಾನು ರಾಜಕೀಯ ಸನ್ಯಾಸತ್ವ ತಗೊಳ್ತೀನಿ ಅಂದಿದ್ರು ಯಡಿಯೂರಪ್ಪ. ಕಾಂಗ್ರೆಸ್‌ನ ಕೆ.ಬಿ ಪ್ರಸನ್ನ ಕುಮಾರ್ ಅನಿರೀಕ್ಷಿತವಾಗಿ ಗೆದ್ದರೆ, ಈಶ್ವರಪ್ಪ ಮೂರನೆಯ ಸ್ಥಾನಕ್ಕೆ ಕುಸಿದಿದ್ದರು. ರುದ್ರೇಗೌಡರನ್ನು ಕೆಜೆಪಿ ಮೂಲಕ ಇಳಿಸಿ ಮತಗಳಿಕೆಯಲ್ಲಿ ಎರಡನೆಯ ಸ್ಥಾನಕ್ಕೆ ತಂದಿದ್ದು ಯಡಿಯೂರಪ್ಪನವರ ಪ್ರಭಾವವೇ! ಆ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತೋ ಅಲ್ಲಿ ಬಹಳಷ್ಟು ಕಡೆ ಕೆಜೆಪಿ ಎರಡನೇ ಸ್ಥಾನ ಮತ್ತು ಮೂರನೆ ಸ್ಥಾನ ಪಡೆದಿತ್ತು. ಅಲ್ಲಿಗೆ ಬಿಜೆಪಿ ಮತಬ್ಯಾಂಕ್ ಅನ್ನು ಸ್ಪಷ್ಟವಾಗಿ ಛಿದ್ರ ಮಾಡಿದ್ದರು ಯಡಿಯೂರಪ್ಪ. ಕರ್ನಾಟಕದಲ್ಲಿ ಪಕ್ಷವನ್ನು ಡ್ಯಾಮೇಜ್ ಮಾಡಬಲ್ಲ ತಾಕತ್ತಿದ್ದ ಇಬ್ಬರು ನಾಯಕರಲ್ಲಿ ಮೊದಲನೆಯವರು ಬಂಗಾರಪ್ಪ ಎರಡನೆಯವರೇ ಯಡಿಯೂರಪ್ಪ. 2014ರ ಲೋಕಸಭಾ ಚುನಾವಣೆ, 2017ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಯಡಿಯೂರಪ್ಪನವರ ಸಂಘಟನಾ ಶಕ್ತಿ ಇಲ್ಲದಿದ್ದರೆ ಬಿಜೆಪಿ ಇಲ್ಲಿ ಗಟ್ಟಿಯಾಗಿ ತಳವೂರಲು ಸಾಧ್ಯವಿತ್ತಾ?
Narendra modi Saaksha tv

ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು, ನಿಷ್ಟರನ್ನು ಹಾಗೂ ಆತ್ಮೀಯರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇದಕ್ಕೆ ಉದಾಹರಣೆ ಸದ್ಯ ಸಾಗರದ ಶಾಸಕ ಹರತಾಳು ಹಾಲಪ್ಪ. ಹಾಗೆಯೇ ತಮ್ಮ ವಿರೋಧಿಗಳನ್ನು ಯಾವತ್ತಿಗೂ ಕ್ಷಮಿಸಲ್ಲ ಅನ್ನುವುದಕ್ಕೆ ನಿದರ್ಶನ ಅದೇ ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಇವತ್ತೂ ಯಡಿಯೂರಪ್ಪ ಮನಸು ಮಾಡಿದರೆ ಯಾವುದೇ ಪ್ರಭಾವಿ ಜನನಾಯಕರನ್ನು ಅವರದ್ದೇ ಕ್ಷೇತ್ರದಲ್ಲಿ ಸೋಲಿಸಬಲ್ಲರು. ಆದರೆ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವವರಲ್ಲ. ಒಂದು ಕಾಲದಲ್ಲಿ ಪತ್ರಕರ್ತನಾಗಿದ್ದವ, ಅವರನ್ನು ಹಿಗ್ಗಾಮುಗ್ಗ ಖಂಡಿಸಿ ಉದ್ದುದ್ದ ಅಂಕಣ ಬರೆದವ ಕೂಡಾ ಟಿಕೆಟ್ ಸಿಕ್ಕ ಕೂಡಲೇ ಓಡಿದ್ದೇ ಯಡಿಯೂರಪ್ಪನವರ ಮನೆಗೆ. ಯಾವ ಕಹಿಯನ್ನೂ ಮನಸಿನಲ್ಲಿಟ್ಟುಕೊಳ್ಳದ ಅವರು ಆ ಒಕ್ಕಲಿಗ ಪತ್ರಕರ್ತನನ್ನು ಗೆಲ್ಲಿಸಿ ದೆಹಲಿ ಪಾರ್ಲಿಮೆಂಟ್ ಕಾಣುವಂತೆ ಮಾಡಿದ್ರು. ಅವರಿಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಉಳಿದೆಲ್ಲಾ ನಾಯಕರ ಬಗ್ಗೆ ಅವರಿಗೆ ಆಪ್ತ ಒಡನಾಟವೂ ಇದೆ. ಕಾಂಗ್ರೆಸ್ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಹೆಚ್ ಕೆ ಪಾಟಿಲ್, ದೇಶಪಾಂಡೆ ಮುಂತಾವರು, ಜನತಾದಳದ ವೈಎಸ್ವಿ ದತ್ತ, ಬಸವರಾಜ್ ಹೊರಟ್ಟಿ ಮುಂತಾದ ನಾಯಕರೊಟ್ಟಿಗೆ ನಿಕಟವಾದ ರಾಜಕೀಯೇತರ ಸ್ನೇಹವಿದೆ.

ಒಂದು ಕಾಲದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಮತ್ತು ಅನಂತ್ ಕುಮಾರ್‌ರನ್ನು ದೆಹಲಿಯ ಬಿಜೆಪಿ ನಾಯಕರು ಸೆಟ್ ದೋಸೆ ಎನ್ನುತ್ತಿದ್ದರು. ಅಷ್ಟರಮಟ್ಟಿಗೆ ಇವರು ಮೂವರು ಒಟ್ಟಿಗಿರುತ್ತಿದ್ದರು. ಪಕ್ಷದೊಳಗಿದ್ದವರೇ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ಹುಳಿ ಹಿಂಡಿದರು. ಯಡಿಯೂರಪ್ಪ ಅದೇ ಅನಂತ್‌ಕುಮಾರ್‌ ಪತ್ನಿ ತೇಜಸ್ವಿನಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್‌ ಕೇಳಿದರೆ, ಎಳಸು ಬ್ರಾಹ್ಮಣ ಮಾಣಿಗೆ ಟಿಕೆಟ್‌ ಫೈನಲ್‌ ಮಾಡಿತು ಕೇಂದ್ರ. ಯಡಿಯೂರಪ್ಪ ಯಾರ ಮೇಲೆಯೂ ಅವಲಂಬಿತರಾಗಿ ಬೆಳೆದವರಲ್ಲ. ಮೊದಲಿನಿಂದಲೂ ಅವರದ್ದು ಒಂಟಿನಡಿಗೆಯೇ. ಯಡಿಯೂರಪ್ಪನವರ ಯುಗಾಂತ್ಯವಾಗಿದೆ ಎನ್ನುವ ಹಮ್ಮಿನಲ್ಲಿ ಬಿಜೆಪಿ ನಾಯಕರು ಯಡಿಯೂರಪ್ಪನವರ ನಂತರದ ಪಕ್ಷ ಸಂಘಟನೆ, ನಾಯಕತ್ವ ಉಸ್ತುವಾರಿ, ಯಾರಿಗೆ ಪಟ್ಟಾಭಿಷೇಕ ಅನ್ನುವ ಲೆಕ್ಕಾಚಾರದಲ್ಲಿದ್ದಾರೆ. ಅವರ್ಯಾರಿಗೂ ಗೊತ್ತಿಲ್ಲ, ಮುಂದಿನ ಚುನಾವಣೆಯ ಹೊತ್ತಿಗೆ ಸಂಪೂರ್ಣ ರಾಜಕೀಯ ಚಿತ್ರಣವೇ ಬದಲಾಗಿರುತ್ತದೆ. ಕರ್ನಾಟಕದಲ್ಲಿ ಯಡಿಯೂರಪ್ಪನವರೇ ಕಟ್ಟಿರುವ ಕಮಲದ ದಳಗಳು ಒಂದೊಂದಾಗಿ ಉದುರಿದರೂ ಅಚ್ಚರಿಯಿಲ್ಲ. ಯಾಕಂದರೆ ಪಿಚ್ಚರ್‌ ಅಭಿ ಬಾಕಿ ಹೈ..!

(ಯಡಿಯೂರಪ್ಪನವರ ಸದ್ಯದ ನಿಲುವುಗಳೇನು, ತಣ್ಣನೆಯ ರಾಜಕೀಯ ತಂತ್ರಗಾರಿಕೆಯೇನು ಅನ್ನುವುದರ ಕುರಿತು ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ)

-ವಿಭಾ
***

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd