ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಹೋರಾಟ ನಡೆದ ಸಂದರ್ಭದಲ್ಲಿ ಹುತಾತ್ಮರಾಗಿರುವ ರಾಜ್ಯದ ಯೋಧನ ಮೃತದೇಹ ಆಗಮಿಸಿದೆ.
ನಗರದ ಜಿಗಣಿಯ ಕ್ಯಾಪ್ಟನ್ ಪ್ರಾಂಜಲ್ (Captain Pranjal) ಮೃತದೇಹ ಬೆಂಗಳೂರಿಗೆ (Bengaluru) ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್‍ಎಎಲ್‍ನಲ್ಲಿ (HAL) ಮೃತ ಯೋಧನ ಪಾರ್ಥಿವ ಶರೀರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಸಚಿವ ಕೆ.ಜೆ ಜಾರ್ಜ್, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ.
ರಜೌರಿಯಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಸಾವನ್ನಪ್ಪಿದ್ದರು. ಇದರಲ್ಲಿ ರಾಜ್ಯದ ಯೋಧ ಪ್ರಾಂಜಲ್ ಕೂಡ ಸೇರಿದ್ದರು. ಹೀಗಾಗಿ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಿದೆ.
ಯೋಧನ ನಂದನವನ ಬಡಾವಣೆಯ ನಿವಾಸದಲ್ಲಿ ರಾತ್ರಿ ವೇಳೆ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.