ಹೊಸದಿಲ್ಲಿ, ಮೇ 29 : ಮೇ 30ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಸತತ 2ನೇ ಬಾರಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಾರ್ಷಿಕೋತ್ಸವದ ತಯಾರಿಯಲ್ಲಿ ತೊಡಗಿದ್ದು, ದೇಶದಾದ್ಯಂತ ಜೂನ್ ನಲ್ಲಿ ಒಂದು ತಿಂಗಳ ಕಾಲ ಡಿಜಿಟಲ್ ರ‍್ಯಾಲಿ ನಡೆಸಲು ತೀರ್ಮಾನಿಸಿದೆ.
ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕತ್ವದಿಂದ ಸುಮಾರು 1000 ವರ್ಚ್ಯುಯಲ್ ಸಭೆಗಳನ್ನು (ವಿಡಿಯೋ ಕಾನ್ಫರೆನ್ಸ್) ನಡೆಸಲು ಸಿದ್ಧತೆ ನಡೆಸಿರುವ ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ
ಮೊದಲ ದಿನ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಲಿದ್ದು , ಪಕ್ಷದ ವತಿಯಿಂದ ದೇಶದ ಎಲ್ಲಾ 909 ಜಿಲ್ಲೆಯಲ್ಲಿಯೂ ಡಿಜಿಟಲ್ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಬಹುತೇಕ ಕಾರ್ಯಕ್ರಮಗಳು ಆನ್ ಲೈನ್ ಮೂಲಕವೇ ನಡೆಯಲಿದ್ದು, ಆರ್ಟಿಕಲ್ 370 ರದ್ದತಿ, ತ್ರಿವಳಿ ತಲಾಖ್ ಕಾಯ್ದೆ ಜಾರಿ, ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನಾ ಪಟ್ಟಿಯಲ್ಲಿರಲಿವೆ ಮತ್ತು ಎಲ್ಲಾ ಕಾರ್ಯಕ್ರಮಗಳಲ್ಲಿ ‘ಆತ್ಮ ನಿರ್ಭರ್ ಭಾರತ್’ ಕೇಂದ್ರಬಿಂದುವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ದೇಶಾದ್ಯಂತ 10 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬರಹದ ಪತ್ರವನ್ನು ತಲುಪಿಸುವ ಗುರಿ ಹೊಂದಲಾಗಿದ್ದು, ಪ್ರಧಾನಿ ಮೋದಿ ಅವರು ಬರೆದಿರುವ ಈ ಪತ್ರದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಲಹೆಗಳು ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಇರಲಿವೆ. ಸ್ವಾವಲಂಬಿ ಭಾರತ , ಪಕ್ಷದ ಸಾಧನೆಗಳ ಕುರಿತೂ ಪ್ರಧಾನಿ ಮೋದಿ ಪತ್ರದಲ್ಲಿ ವಿವರಿಸಲಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.








