ಮಾಯಾವತಿ ಬಿಜೆಪಿಯ ಅಘೋಷಿತ ವಕ್ತಾರೆ – ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯ
ಹೊಸದಿಲ್ಲಿ, ಜುಲೈ 2: ಕಾಂಗ್ರೆಸ್ ನಾಯಕಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಹುಜನ ಸಮಾಜ ಪಾರ್ಟಿಯ ವಕ್ತಾರೆ ಮಾಯಾವತಿ ಅವರನ್ನು ಪರೋಕ್ಷವಾಗಿ ಬಿಜೆಪಿಯ ಅಘೋಷಿತ ವಕ್ತಾರೆ ಎಂದು ವ್ಯಂಗ್ಯವಾಡಿದ್ದಾರೆ
ಮಾಯಾವತಿ ಈ ಹಿಂದೆ ಭಾರತ-ಚೀನಾ ಗಡಿ ಸಂಘರ್ಷದ ವಿಚಾರದಲ್ಲಿ ಬಹುಜನ ಸಮಾಜ ಪಾರ್ಟಿಯ ಬೆಂಬಲ ಬಿಜೆಪಿ ಪಕ್ಷಕ್ಕೆ ಎಂದು ಹೇಳಿದ್ದರು.
ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಮಾಯಾವತಿ ಭಾರತ-ಚೀನಾ ಗಡಿ ಸಂಘರ್ಷದ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಸಹ ನಮ್ಮ ಬೆಂಬಲ ಇದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಕಾಂಗ್ರೆಸ್ ಬಡವರು, ಹಿಂದುಳಿದವರಿಗಾಗಿ ಏನು ಮಾಡುತ್ತಿದೆ ?. ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ಉದ್ಯೋಗ ಮತ್ತು ಸುರಕ್ಷತೆಗಾಗಿ ಏನು ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿ, ಅವರನ್ನು ಪರೋಕ್ಷವಾಗಿ ಬಿಜೆಪಿಯ ಅಘೋಷಿತ ವಕ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಇತ್ತೀಚೆಗೆ ಕೆಲ ಪ್ರತಿಪಕ್ಷಗಳ ಮುಖ್ಯಸ್ಥರು ಬಿಜೆಪಿಯ ಅಘೋಷಿತ ವಕ್ತಾರರಾಗಿ ಬದಲಾಗುತ್ತಿದ್ದು, ಅದು ನನ್ನ ಗ್ರಹಿಕೆಗೆ ಸ್ಪಷ್ಟವಾಗಿ ಬರುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ
ಚೀನಾ ವಿಚಾರದಲ್ಲಿ ಯಾರೂ ಕೂಡ ಯಾವುದೇ ರಾಜಕೀಯ ಪಕ್ಷದ ಜತೆ ನಿಲ್ಲುವ ಅಗತ್ಯವಿಲ್ಲ, ಅದಕ್ಕೆ ಬದಲಾಗಿ ಪ್ರತಿಯೊಬ್ಬರೂ ಇಡೀ ದೇಶದ, ಭೂಮಿಯ ಐಕ್ಯತೆ, ಸಮಗ್ರತೆಗಾಗಿ ಒಗ್ಗಟ್ಟಾಗಿ ನಿಂತರೆ ಸಾಕು ಎಂದು ಹೇಳಿದ್ದಾರೆ.