ರಷ್ಯದಲ್ಲಿ ಅಂಗಡಿಗಳನ್ನು ಬಂದ್ ಮಾಡಿದ ಮೆಕ್‍ಡೋನಾಲ್ಡ್, ಸ್ಟಾರ್‌ಬಕ್ಸ್, ಪೆಪ್ಸಿ – Saaksha Tv
ರಷ್ಯಾ: ಮೆಕ್‍ಡೋನಾಲ್ಡ್, ಸ್ಟಾರ್‌ಬಕ್ಸ್, ಪೆಪ್ಸಿ ಸೇರಿದಂತೆ ಕೆಲ ಕಂಪನಿಗಳು ತಮ್ಮ ಆಹಾರ ಉತ್ಪನ್ನಗಳ ಅಂಗಡಿಗಳನ್ನು ರಷ್ಯಾದಲ್ಲಿ ಮುಚ್ಚಲು ತೀರ್ಮಾನಿಸಿವೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ಕಾರಣ ಕಂಪನಿಗಳು ತಮ್ಮ ಅಂಗಡಿಗಳನ್ನು ರಷ್ಯಾದಲ್ಲಿ ಮುಚ್ಚಲು ಮುಂದಾಗಿವೆ. ಇದರಿಂದ ರಷ್ಯಾಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ಅಮೆರಿಕ ಮೂಲದ ಕಂಪನಿಗಳಾಗಿದ್ದರಿಂದ ಈ ನಿರ್ಧಾರನ್ನು ಕಂಪನಿಗಳು ತೆಗೆದುಕೊಂಡಿವೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೆಕ್‍ಡೋನಾಲ್ಡ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಕೆಂಪ್‍ಜಿನ್ಸ್ಕಿ, ಉಕ್ರೇನ್‍ನಲ್ಲಿ ಅನಾವಶ್ಯಕವಾದ ದಾಳಿಯಿಂದಾದ ಸಾವು ನೋವುಗಳನ್ನು ಸಹಿಸುವುದಿಲ್ಲ. ಹಾಗಾಗಿ ನಮ್ಮ ಶಾಪ್‍ಗಳನ್ನು ಸದ್ಯದ ಮಟ್ಟಿಗೆ ಮುಚ್ಚುತ್ತಿರುವುದಾಗಿ ಉದ್ಯೋಗಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ಮೆಕ್‍ಡೋನಾಲ್ಡ್‌ನ 800 ಶಾಪ್‍ಗಳನ್ನು ರಷ್ಯಾದಲ್ಲಿ ಮುಚ್ಚಲು ತೀರ್ಮಾನಿಸಿದೆ. ಆದರೆ ಅಲ್ಲಿ ಉದ್ಯೋಗ ಮಾಡುತ್ತಿದ್ದ 62 ಸಾವಿರ ಉದ್ಯೋಗಿಗಳಿಗೆ ವೇತನವನ್ನು ಈ ಹಿಂದಿನಂತೆ ಮುಂದುವರಿಸಲು ನಿರ್ಧರಿಸಿದೆ.
ರಷ್ಯಾದಲ್ಲಿರುವ ಸ್ಟಾರ್‌ಬಕ್ಸ್‌ನ 130 ಶಾಪ್‍ಗಳನ್ನು ಮುಚ್ಚಲು ತೀರ್ಮಾನಿಸಿದ್ದು, ಆದರೆ ಇಲ್ಲಿನ 2,000 ಉದ್ಯೋಗಿಗಳಿಗೆ ಸಂಬಳವನ್ನು ಮಾತ್ರ ಈ ಹಿಂದಿನಂತೆ ಕೊಡುವುದಾಗಿ ಸ್ಟಾರ್‌ಬಕ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಕೆವಿನ್ ಜಾನ್ಸನ್ ತಿಳಿಸಿದ್ದಾರೆ.
ಪೆಪ್ಸಿ ಮತ್ತು ಕೋಕಾ ಕೋಲಾ ಕಂಪನಿ ರಷ್ಯಾದ ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಬಂದ್ ಮಾಡಲು ತೀರ್ಮಾನಿಸಿದೆ. ಆದರೆ ಮಕ್ಕಳ ಆಹಾರ, ಹಾಲು ಇನ್ನಿತರ ಕೆಲ ಆಹಾರ ಉತ್ಪನ್ನಗಳನ್ನು ಮುಂದುವರಿಸಲು ತೀರ್ಮಾನಿಸಿದೆ. ರಷ್ಯಾದ 20 ಸಾವಿರ ಉದ್ಯೋಗಿಗಳು ಮತ್ತು 40 ಸಾವಿರ ಕೃಷಿಕರು ಈ ಆಹಾರ ಉತ್ಪನ್ನಗಳೊಂದಿಗೆ ಕೈ ಜೋಡಿಸಿರುವ ಪರಿಣಾಮ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ.









