ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಒಂದೆಡೆ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ದಿನಕ್ಕೊಂದು ತಂತ್ರವನ್ನು ರೂಪಿಸುತ್ತಿದೆ. ಮೊನ್ನೆಯಷ್ಟೆ ಬೆಂಗಳೂರಿನ ಎಲ್ಲಾ ಶಾಸಕರ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿದ್ದರು. ಇದೀಗ ಬೆಂಗಳೂರಿನ ಎಲ್ಲಾ ಪಾಲಿಕೆ ಸದ್ಯಸರ ಜೊತೆ ಸಭೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಕಾರ್ಯದಲ್ಲಿ ಪಾಲಿಕೆ ಸದಸ್ಯರನ್ನು ಭಾಗಿಯಾಗುವಂತೆ ಮಾಡಲು ಬೆಂಗಳೂರು ಕೋವಿಡ್ ಉಸ್ತುವರಿ ಸಚಿವ ಆರ್.ಅಶೋಕ್ ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನ ಪ್ರತಿಯೊಂದು ವಾರ್ಡ್ ನ ಕಾರ್ಪೊರೇಟರ್ ಗೂ ತಮ್ಮ ತಮ್ಮ ವಾರ್ಡ್ ಜವಬ್ದಾರಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಸಚಿವ ಆರ್.ಅಶೋಕ್ ಬೆಂಗಳೂರಿನ ಎಲ್ಲಾ ಪಾಲಿಕೆ ಸದಸ್ಯರ ಸಭೆ ಕರೆಯಲಾಗಿದೆ. ಸಭೆಯನ್ನು ಮೂರು ಹಂತದಲ್ಲಿ ನಡೆಸಲಾಗುತ್ತದೆ. ಬಿಬಿಎಂಪಿ ಕಚೇರಿಯಲ್ಲಿ ಎಲ್ಲಾ ಸದಸ್ಯರು ಸೇರಿ ಒಟ್ಟಿಗೆ ಸಭೆ ನಡೆಸಿದರೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಮೂರು ಹಂತದಲ್ಲಿ ಸಭೆ ನಡೆಸುತ್ತೇವೆ ಎಂದು ಹೇಳಿದ್ದಾರೆ.