6ನೇ ಸುತ್ತಿನ ಮಿಲಿಟರಿ ಮಾತುಕತೆ- ದಕ್ಷಿಣ ದಂಡೆ ಪ್ರದೇಶದಿಂದ ಹಿಂದೆ ಸರಿಯುವಂತೆ ಭಾರತಕ್ಕೆ ಸೂಚಿಸಿದ ಚೀನಾ
ಲಡಾಖ್, ಸೆಪ್ಟೆಂಬರ್23: ಆರನೇ ಸುತ್ತಿನ ಸೇನಾ ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭದಲ್ಲಿ, ದಕ್ಷಿಣ ದಂಡೆಯಲ್ಲಿ ಭಾರತೀಯ ಪಡೆ ವಶಪಡಿಸಿಕೊಂಡ ಪ್ರದೇಶಗಳನ್ನು ಖಾಲಿ ಮಾಡುವಂತೆ ಚೀನಾ ಸೂಚಿಸಿದೆ. ಆಗಸ್ಟ್ 29 ರ ನಂತರ ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತೀಯ ಪಡೆಗಳು ವಶಪಡಿಸಿಕೊಂಡಿರುವ ಸ್ಥಾನಗಳನ್ನು ಖಾಲಿ ಮಾಡುವಂತೆ ಚೀನಾ ಭಾರತವನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ನಡೆದ ಮಾತುಕತೆಯು, ಪೂರ್ವ ಲಡಾಖ್‌ನ ಉದ್ದಕ್ಕೂ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸುವ ಮಾರ್ಗಗಳ ಮೇಲೆ ಕೇಂದ್ರೀಕರಿಸಿದೆ.
ಮಾತುಕತೆಯಲ್ಲಿ, ಪೂರ್ವ ಲಡಾಖ್ ವಲಯದಲ್ಲಿ 2020 ರ ಏಪ್ರಿಲ್-ಮೇ ಅವಧಿಯ ಮೊದಲು ಚೀನಾ ಅಸ್ತಿತ್ವದಲ್ಲಿದ್ದ ಸ್ಥಾನಗಳಿಗೆ ಮರಳಬೇಕು ಎಂದು ಭಾರತ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಘರ್ಷಣೆ ಸ್ಥಳಗಳಿಂದ ಚೀನಾದ ಸೈನ್ಯವನ್ನು ಮುಂಚಿನ ಮತ್ತು ಸಂಪೂರ್ಣ ಹಿಂದೆ ಸರಿಯುವಂತೆ ಭಾರತ ಒತ್ತಾಯಿಸಿದೆ. ಜೊತೆಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸದೆ ಇರಲು ಚೀನಾ ಮೊದಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಚೀನಾ ಪರಸ್ಪರ ಮಾತುಕತೆ ಮುಂದುವರೆಸಲು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಲು ಸಂವಹನ ಮಾರ್ಗಗಳನ್ನು ಮುಕ್ತವಾಗಿಡಲು ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.
ಆರನೇ ಸುತ್ತಿನ ಮಿಲಿಟರಿ ಮಾತುಕತೆಯು ಪೂರ್ವ ಲಡಾಖ್‌ನ ಭಾರತದ ಚುಶುಲ್ ಸೆಕ್ಟರ್‌ನಾದ್ಯಂತ ನೈಜ ನಿಯಂತ್ರಣ ರೇಖೆಯ ಚೀನಾದ ಬದಿಯಲ್ಲಿರುವ ಮೊಲ್ಡೊದಲ್ಲಿ ನಡೆಯಿತು. ಮಾತುಕತೆ ಬೆಳಿಗ್ಗೆ ಪ್ರಾರಂಭವಾಗಿ ರಾತ್ರಿ 11 ಕ್ಕೆ ಕೊನೆಗೊಂಡಿತು. ಭಾರತೀಯ ನಿಯೋಗದ ನೇತೃತ್ವವನ್ನು ಭಾರತೀಯ ಸೇನೆಯ ಲೇಹ್ ಮೂಲದ 14 ಕಾರ್ಪ್ಸ್ ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ವಹಿಸಿದ್ದರು.
ಮೊದಲ ಬಾರಿಗೆ ಮಿಲಿಟರಿ ಮಾತುಕತೆಗಾಗಿ ಭಾರತ ತಂಡವು ವಿದೇಶಾಂಗ ಸಚಿವಾಲಯದ (ಎಂಇಎ) ಹಿರಿಯ ಅಧಿಕಾರಿಯನ್ನೂ ಒಳಗೊಂಡಿತ್ತು. ಗಡಿ ವ್ಯವಹಾರಗಳ ಕುರಿತು ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್ (ಡಬ್ಲ್ಯುಎಂಸಿಸಿ) ಯ ಚೌಕಟ್ಟಿನಡಿಯಲ್ಲಿ ಗಡಿ ಸಾಲಿನಲ್ಲಿ ಚೀನಾ ಜೊತೆ ರಾಜತಾಂತ್ರಿಕ ಮಾತುಕತೆ ನಡೆಸುತ್ತಿರುವ ಎಂಇಎ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಅವರು ನಿಯೋಗದ ಭಾಗವಾಗಿದ್ದರು. ಈ ತಂಡವು ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರನ್ನೂ ಒಳಗೊಂಡಿದ್ದು, ಮುಂದಿನ ತಿಂಗಳು 14 ಕಾರ್ಪ್ಸ್ ನ ಕಮಾಂಡರ್ ಆಗಿ ಸಿಂಗ್ ಬಳಿಕ ಉತ್ತರಾಧಿಕಾರಿಯಾಗಲಿದ್ದಾರೆ.
ಹಿಂದಿನ ಐದು ಸುತ್ತಿನ ಕಾರ್ಪ್ಸ್ ಕಮಾಂಡರ್-ಮಟ್ಟದ ಮಾತುಕತೆಗಳಲ್ಲಿ, ಭಾರತ ಚೀನಾ ತನ್ನ ಸೈನ್ಯವನ್ನು ಶೀಘ್ರವಾಗಿ ಹಿಂಪಡೆಯಬೇಕೆಂದು ಒತ್ತಾಯಿಸಿದರು ಮತ್ತು ಏಪ್ರಿಲ್ ನ ಮೊದಲು ಪೂರ್ವ ಲಡಾಕ್‌ನ ಎಲ್ಲಾ ಪ್ರದೇಶಗಳಲ್ಲಿ ಯಥಾಸ್ಥಿತಿ ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದರು.








