ವಿಕ್ಟೋರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ ; ರೋಗಿಗಳ ಜತೆ ವಿಡಿಯೋ ಸಂವಾದ

ವಿಕ್ಟೋರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ ; ರೋಗಿಗಳ ಜತೆ ವಿಡಿಯೋ ಸಂವಾದ

ಲೋಪಗಳಿಗೆ ಅವಕಾಶ ನೀಡಬೇಡಿ : ವೈದ್ಯರಿಗೆ ಸೂಚನೆ

ಬೆಂಗಳೂರು : ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಪರಿಶೀಲನೆ ನಡೆಸಿದ ಸಚಿವರು ಸಭೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಧ್ಯಮಗಳಲ್ಲಿ ಆಸ್ಪತ್ರೆಗೆ ಸಂಬಂಧಿಸಿದಂತೆ ನಕಾರಾತ್ಮಕ ವರದಿಗಳು ಬರುತ್ತಿವೆ. ಹಗಲು- ರಾತ್ರಿ ಲೆಕ್ಕಿಸದೆ ಮುಖ್ಯ ಮಂತ್ರಿ ಆದಿಯಾಗಿ ಎಲ್ಲರೂ ಕೆಲಸ ಮಾಡುತ್ತಿರುವಾಗ ಇಂತಹ ಲೋಹಗಳನ್ನು ಸಹಿಸಲು ಸಾಧ್ಯವಿಲ್ಲ. ನಿಮಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಲು ಸಿದ್ಧ ಆದರೆ ತಪ್ಪುಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದರು.
ಪ್ರತಿದಿನ ದಾಖಲು ಆಗುತ್ತಿರುವ ಸೋಂಕಿತರು ಮತ್ತು ಗುಣಮುಖರಾಗಿ ಬಿಡುಗಡೆ ಆಗುವವರ ಸಂಖ್ಯೆ ಯನ್ನು ಅಧಿಕೃತವಾಗಿ ತಿಳಿಸುವ ವ್ಯವಸ್ಥೆ ಮಾಡಬೇಕು. ಹಾಗೆಯೇ ಸಾವಿನ ಸಂಖ್ಯೆ ಮತ್ತು ಕಾರಣಗಳು, ಗಂಭೀರ ಸ್ಥಿತಿಯಲ್ಲಿ ಇರುವವರು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅನುಸರಿಸುತ್ತಿರುವ ಚಿಕಿತ್ಸಾ ವಿಧಿ- ವಿಧಾನಗಳು, ಡಯಾಲಿಸಿಸ್ ಸೌಲಭ್ಯ ಪಡೆಯುತ್ತಿರುವವರ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಪ್ರತಿದಿನವೂ ಕೊಡಬೇಕು. ಹಾಗೆಯೇ ಗರ್ಭಿಣಿಯರ ವಿವರಗಳನ್ನು ನೀಡಲು ಸೂಚಿಸಿದರು.
ಈ ಹಿಂದೆ ಸೂಚನೆ ನೀಡಿದ್ದಂತೆ ಟೆಲಿ ಐಸಿಯುಗೆ ಸೇರ್ಪಡೆ ಮಾಡಿಲ್ಲದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆದಷ್ಟು ಬೇಗ ಸೇರ್ಪಡೆ ಮಾಡುವಂತೆ ತಿಳಿಸಿದರು.
ಇದಾದ ಬಳಿಕ ವಿಡಿಯೋ ಸಂವಾದದ ಮೂಲಕ ಐಸಿಯು, ವಾರ್ಡುಗಳಲ್ಲಿರುವ ರೋಗಿಗಳ ಜತೆ ಸಮಾಲೋಚನೆ ನಡೆಸಿ ಚಿಕಿತ್ಸೆ ಮತ್ತು ಸೌಲಭ್ಯಗಳ ಗುಣಮಟ್ಟದ ಬಗ್ಗೆ ವಿಚಾರಿಸಿದರು. ಊಟದ ಗುಣಮಟ್ಟದ ಬಗ್ಗೆ ವಿಚಾರಿಸಿದರು. ಅದಕ್ಕೆ ಎಲ್ಲಾ ರೋಗಿಗಳು ತೃಪ್ತಿ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This