ಕಾಮಗಾರಿಗಳ ವೇಗ ಹೆಚ್ಚಿಸಲು ಅಧಿಕಾರಿಗಳಿಗೆ ಸಚಿವ ವಿ ಸೋಮಣ್ಣ ಸೂಚನೆ V Somanna saaksha tv
ಬೆಂಗಳೂರು:ವಿಧಾನಸೌಧದಲ್ಲಿಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಸಚಿವ ವಿ ಸೋಮಣ್ಣ ಅಧ್ಯಕ್ಷತೆಯಲ್ಲಿ ಇಲಾಖೆಯ ಉನ್ನತ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮೂಲ ಸೌಲಭ್ಯ ಇಲಾಖೆಯ ಕಾಮಗಾರಿಗಳಿಗೆ ತ್ವರಿತವಾಗಿ ಸಂಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ರಾಜ್ಯದಲ್ಲಿ ಒಟ್ಟು ಎಂಟು ರೈಲ್ವೆ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳು ನಡೆಯುತ್ತಿದೆ.
ಮುನರಾಬಾದ್-ಮೆಹಬೂಬ್ ನಗರ, ತುಮಕೂರು-ರಾಯದುರ್ಗ, ಬಾಗಲಕೋಟೆ-ಕುಡುಚಿ, ಗದಗ-ವಾಡಿ, ತುಮಕೂರು-ದಾವಣಗೆರೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು,
ಚಿಕ್ಕಮಗಳೂರು-ಬೇಲೂರು, ಬೇಲೂರು- ಹಾಸನ, ಹಾಗೂ ಧಾರವಾಡ-ಬೆಳಗಾವಿ ಒಟ್ಟು ಎಂಟು ಯೋಜನೆಗಳಿಗೆ ಮುಂದುವರಿದ ಭಾಗವಾಗಿ ಭೂಸ್ವಾಧಿನ ಪ್ರಕಿಯೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಶೀಘ್ರವೇ ಸುಖಾಂತ್ಯ ಸಿಗಲಿದೆ ಎಂದರು.
ಇನ್ನೂ ಶಿವಮೊಗ್ಗ ವಿಮಾನ ನಿಲ್ದಾಣ, ವಿಜಯಪುರ ವಿಮಾನ ನಿಲ್ದಾಣ, ಹಾಸನ ವಿಮಾನ ನಿಲ್ದಾಣ, ರಾಯಚೂರು ವಿಮಾನ ನಿಲ್ದಾಣ, ಕಾರವಾರ ಸಿವಿಲ್ ವಿಮಾನ ನಿಲ್ದಾಣಗಳ ಕಾಮಗಾರಿಗಳಿಗೆ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದ್ದು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲು ಹಿರಿಯ ಅಧಿಕಾರಿಗಳ ಚರ್ಚೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಒಟ್ಟು 384 ಕೋಟಿ ರೂಗಳು ಮೀಸಲಿಟ್ಟಿದ್ದು, ಮೊದಲ ಹಂತದಲ್ಲಿ 235ಕೋಟಿ ರೂಗಳ ಕಾಮಗಾರಿಗಳು ಪ್ರಗತಿಯಲ್ಲಿದೆ, ಶೇಕಡಾ 40ರಷ್ಟು ಕೆಲಸ ಆಗಿದೆ.
ಎರಡನೇ ಪ್ಯಾಕೇಜ್ ನಲ್ಲಿ 128ಕೋಟಿ ನಾಲ್ಕು ತಿಂಗಳ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಒಟ್ಟು 125ಕೋಟಿ ರೂ.ಬಿಡುಗಡೆಯಾಗಿದೆ.
ಈ ಕಾಮಗಾರಿ 2022ರಲ್ಲಿ ಲೋಕಾರ್ಪಣೆಯಾಗುವ ಭರವಸೆಯಿದೆ ಎಂದರು.
ವಿಜಯಪುರದಲ್ಲಿ 727ಎಕರೆ ಭೂಮಿ ವಿಜಯಪುರ ವಿಮಾನ ನಿಲ್ದಾಣದಕ್ಕಾಗಿ ಭೂಮಿ ಖರೀದಿ ಮಾಡಲಾಗಿದೆ. ಒಟ್ಟು 225 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಇನ್ನು, ಹಾಸನದಲ್ಲಿ 536 ಎಕರೆ ಈಗಾಗಲೇ ಭೂಮಿ ಖರೀದಿ ಮಾಡಲಾಗಿದೆ. ರಾಯಚೂರಿನಲ್ಲಿ ನಾನು ಉಸ್ತುವಾರಿ ಸಚಿವನಾಗಿದ್ದಾಗ ಭೂಮಿ ಗೊತ್ತು ಮಾಡಿದ್ದು, ಮೊದಲ ಹಂತದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ.
ಕಾರವಾರದ ಕಾಮಗಾರಿಗಳು ತ್ವರಿತವಾಗಿ ಸಂಪೂರ್ಣವಾಗಲಿದೆ. 2007ರಿಂದಲೂ ನೆನಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಕಾಲಮಿತಿಯೊಳಗೆ ಸಂಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಮಾಜಿ ಸಚಿವರಾದ ಬಸವನಗೌಡ ಪಾಟೀಲ್ ಯತ್ನಾಳ್, ಇಲಾಖಾ ಕಾರ್ಯದರ್ಶಿ ಅನಿಲ್ ಕುಮಾರ್, ಕೆಸಿಡಿಸಿ ನಿರ್ದೇಶಕರಾದ ಮೋಹನ್ ರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.









