ಗಣೇಶ ವೃತ್ತಿದಲ್ಲಿ ಇರುವ ಮೂರ್ತಿಯ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಇಂಡಿ ರಸ್ತೆಯಲ್ಲಿರುವ ಗಣಪತಿ ವೃತ್ತದಲ್ಲಿನ ಮೂರ್ತಿಗೆ ತಡರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಪರಿಣಾಮವಾಗಿ ವೃತ್ತದ ಕಲ್ಲುಗಳು ಪುಡಿ ಪುಡಿಯಾಗಿವೆ. ಗಣೇಶಮೂರ್ತಿಯ ಪಕ್ಕದಲ್ಲಿ ಕಲ್ಲುಗಳು ಬಿದ್ದಿವೆ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಸ್ಥಳಕ್ಕೆ ಆಗಮಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಗಾಂಧಿ ಚೌಕ್ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.
ಹಿಂದೂ ಸಂಘಟನೆ ಕಾರ್ಯಕರ್ತರು, ಸ್ಥಳೀಯರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ನವರಾತ್ರಿ ಆರಂಭದ ಹೊತ್ತಲ್ಲಿ ನಡೆಯುವ ದುರ್ಗಾಮಾತಾ ದೌಡ್ ಸಂದರ್ಭದಲ್ಲೇ ಈ ಘಟನೆ ನಡೆದಿರುವುದಕ್ಕೆ ಆತಂಕ ವ್ಯಕ್ತವಾಗುತ್ತಿದೆ.
ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತರಲು ಈ ರೀತಿಯ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ದುಷ್ಕರ್ಮಿಗಳು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಒಡೆದ ಗಾಜನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ. ನವರಾತ್ರಿ, ದಸರಾ ಸಂದರ್ಭದಲ್ಲಿ ಈ ಕೃತ್ಯ ನಡೆದಿದ್ದಕ್ಕೆ ಹಿಂದೂ ಮುಖಂಡರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.








