ಹಾವೇರಿ : ದುಷ್ಕರ್ಮಿಗಳು ಲಾರಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನದಲ್ಲಿದ್ದ ಬರೋಬ್ಬರಿ 13 ಟನ್ ಸ್ಟೀಲ್‍ನ್ನು (Steel) ದೋಚಿ ಪರಾರಿಯಾಗಿರುವ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣದಲ್ಲಿ ಹಲ್ಲೆಗೆ ಒಳಗಾಗಿದ್ದ ಚಾಲಕ ಸಾವನ್ನಪ್ಪಿದ್ದಾರೆ. ಮೀರಜ್‍ನಿಂದ ಚನ್ನೈನತ್ತ ಹೊರಟಿದ್ದ ಸ್ಟೀಲ್ ತುಂಬಿದ್ದ ಲಾರಿಯನ್ನೇ ಖದೀಮರು ದೋಚಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಲಾರಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಚಾಲಕನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ, ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಚಾಲಕನನ್ನು ಮಹಾರಾಷ್ಟ್ರ ಮೂಲದ ಗೋವಿಂದ ನಾರಾಯಣ ಖಂಡೇಕರ (40) ಎಂದು ಗುರುತಿಸಲಾಗಿದೆ. ಈ ಕುರಿತು ಹಾವೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಜಿಲ್ಲೆಯಲ್ಲಿ ಲಾರಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಕಳೆದ ವರ್ಷ 28 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಚೀಲ ತುಂಬಿದ ಲಾರಿ ಮತ್ತು 27 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಪುಡಿ ಚೀಲ ತುಂಬಿರುವ ಲಾರಿ ಕಳ್ಳತವಾಗಿತ್ತು. ಈ ರೀತಿ ಹಲವು ಪ್ರಕರಣಗಳು ದಾಖಲಾಗಿದ್ದವು. ಸದ್ಯ ಮತ್ತೆ ಇಂತಹುದೇ ಪ್ರಕರಣ ದಾಖಲಾಗಿದೆ.








