ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸಚಿವ ಕೃಷ್ಣ ಭೈರೇಗೌಡ ಅವರು ಭರ್ಜರಿ ಆಕ್ಷನ್ ಮೋಡ್‌ಗೆ ಇಳಿದಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಸಭೆ ಕರೆದ ಸಚಿವರು, ನಗರದ ಅವ್ಯವಸ್ಥೆಗಳ ವಿರುದ್ಧ ಗುಡುಗಿದ್ದಾರೆ. ಕಳಪೆ ರಸ್ತೆಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಭೆಯಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಂಡಿ ಮುಕ್ತ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ? ಅಧಿಕಾರಿಗಳಿಗೆ ಸಚಿವರ ನೇರ ಪ್ರಶ್ನೆ
ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ನಗರದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವುದು ಅಸಾಧ್ಯವೇ? ಎಂದು ಪ್ರಶ್ನಿಸಿದರು. ರಸ್ತೆ ನಿರ್ಮಾಣ ಮಾಡುವುದು ಅಷ್ಟೊಂದು ಕಷ್ಟದ ಕೆಲಸವೇ? ಇದು ರಾಕೆಟ್ ಸೈನ್ಸಾ? ಎಂದು ವ್ಯಂಗ್ಯವಾಡಿದ ಅವರು, ವರ್ಷಪೂರ್ತಿ ಗುಂಡಿ ಮುಚ್ಚುವ ಕೆಲಸವನ್ನೇ ಮಾಡುವುದಕ್ಕಿಂತ, ಗುಂಡಿ ಬೀಳದಂತೆ ರಸ್ತೆ ನಿರ್ಮಿಸಲು ಏಕೆ ಸಾಧ್ಯವಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ರಸ್ತೆ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷಗಳು ಕಂಡುಬಂದರೆ ಸಹಿಸುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು.
ಎಂಜಿನಿಯರ್‌ಗಳ ಮೇಲೆ ಕಠಿಣ ಕ್ರಮದ ವಾರ್ನಿಂಗ್
ಮಳೆಗಾಲದಲ್ಲಿ ಬೆಂಗಳೂರಿನ ರಾಜಕಾಲುವೆಗಳು ಉಕ್ಕಿ ಹರಿಯುವುದು ಮತ್ತು ರಸ್ತೆಗಳು ಕೆರೆಯಂತಾಗುವ ಸಮಸ್ಯೆ ಬಗ್ಗೆಯೂ ಸಚಿವರು ಗಂಭೀರ ಚರ್ಚೆ ನಡೆಸಿದರು. ರಾಜಕಾಲುವೆಗಳ ಹೂಳು ಎತ್ತುವ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದ ಅವರು, ಮುಂದಿನ ದಿನಗಳಲ್ಲಿ ಮಳೆ ಬಂದಾಗ ನೀರು ರಸ್ತೆಯ ಮೇಲೆ ಹರಿದರೆ ಅಥವಾ ಸಾರ್ವಜನಿಕರಿಗೆ ತೊಂದರೆಯಾದರೆ ಆಯಾ ಭಾಗದ ಎಂಜಿನಿಯರ್‌ಗಳನ್ನೇ ನೇರ ಹೊಣೆ ಮಾಡಲಾಗುವುದು. ಅಂತಹ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇ ಖಾತಾ ಮತ್ತು ಕಂದಾಯ ವಸೂಲಿಗೆ ಸೂಚನೆ
ನಗರದ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಆಡಳಿತಾತ್ಮಕ ಸುಧಾರಣೆಗೂ ಸಚಿವರು ಒತ್ತು ನೀಡಿದ್ದಾರೆ. ನಗರದಲ್ಲಿ ಪ್ರಗತಿಯಲ್ಲಿರುವ ವೈಟ್ ಟ್ಯಾಪಿಂಗ್ ಕೆಲಸಗಳು, ಕೆರೆಗಳ ಅಭಿವೃದ್ಧಿ ಮತ್ತು ರಸ್ತೆ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಇ ಖಾತಾ ವಿತರಣೆಯ ಸ್ಥಿತಿಗತಿ ಹಾಗೂ ಈವರೆಗೆ ಬಂದಿರುವ ಅರ್ಜಿಗಳ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದ ಸಚಿವರು, ಕಂದಾಯ ವಸೂಲಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಆದೇಶಿಸಿದರು. ಬಾಕಿ ಇರುವ ತೆರಿಗೆಯನ್ನು ಶೀಘ್ರವಾಗಿ ಸಂಗ್ರಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನನ್ನ ಕನಸಿನ ಬೆಂಗಳೂರು ಸಿಂಪಲ್ ಆಗಿದೆ
ನಗರದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಸಚಿವರು, ನನ್ನ ಕನಸಿನ ಬೆಂಗಳೂರು ಅತ್ಯಂತ ಸರಳವಾಗಿದೆ. ಇಲ್ಲಿ ವಾಸಿಸುವ ಜನರಿಗೆ ಮೂಲಭೂತ ಸೌಕರ್ಯಗಳು ಸುಗಮವಾಗಿ ಸಿಗಬೇಕು ಎನ್ನುವುದೇ ನನ್ನ ಗುರಿ. ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆಗಳ ಸಮಸ್ಯೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ದೆಹಲಿಯಂತಹ ನಗರಗಳಲ್ಲಿ ಸಮಸ್ಯೆಗಳಿದ್ದರೂ ಬೆಂಗಳೂರಿನ ಬಗ್ಗೆಯೇ ಹೆಚ್ಚು ಟೀಕೆಗಳು ಕೇಳಿಬರುತ್ತಿವೆ. ಈ ಇಮೇಜ್ ಬದಲಿಸಲು ನಾವು ಶ್ರಮಿಸುತ್ತೇವೆ ಮತ್ತು ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಖಾತೆ ವಿವಾದಕ್ಕೆ ತೆರೆ ಎಳೆದ ಸಚಿವ ಕೃಷ್ಣ ಭೈರೇಗೌಡ
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಖಾತೆ ಹಂಚಿಕೆ ವಿಚಾರದಲ್ಲಿ ಇದ್ದ ಗೊಂದಲಗಳಿಗೆ ಸಚಿವರು ಇದೇ ವೇಳೆ ಸ್ಪಷ್ಟನೆ ನೀಡಿದರು. ಬೆಂಗಳೂರಿನ ಆಡಳಿತವನ್ನು ಸಮರ್ಪಕವಾಗಿ ನಡೆಸಲು ಪೂರ್ಣ ಪ್ರಮಾಣದ ಖಾತೆಯ ಅವಶ್ಯಕತೆಯಿತ್ತು. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ಗಮನಕ್ಕೆ ತಂದಿದ್ದೆ. ಎಲ್ಲವನ್ನೂ ಪರಿಶೀಲಿಸಿ ಸಿಎಂ ಅವರು ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ನಾನು ಈಗ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ತಿಳಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟರು.







