ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಯೋಜನೆಯ ಸುತ್ತ ಸೃಷ್ಟಿಯಾಗಿರುವ ವಿವಾದವೀಗ ಬಹಿರಂಗ ವಾಗ್ಯುದ್ಧಕ್ಕೆ ಕಾರಣವಾಗಿದೆ. ಇಂದು ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ನಡೆಸಿದ ಸುದ್ದಿಗೋಷ್ಠಿಗೆ ಪ್ರತಿಯಾಗಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಡಿಕೆಶಿ ವಿರುದ್ಧ ಕೆಂಡಕಾರಿದ್ದಾರೆ.
ನಾನು ನಿಮ್ಮನ್ನ ಸಿಎಂ ಎಂದು ಕರೆಯಲ್ಲ
ಸುದ್ದಿಗೋಷ್ಠಿಯ ಆರಂಭದಲ್ಲೇ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಹೆಚ್ ಡಿ ಕುಮಾರಸ್ವಾಮಿ, ಮಿಸ್ಟರ್ ಡಿಕೆ ಶಿವಕುಮಾರ್, ನಾನು ನಿಮ್ಮನ್ನ ಮುಖ್ಯಮಂತ್ರಿ ಅಂತ ಹೇಳಲ್ಲ ಎಂದು ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟು ಜನರ ಹಾದಿ ತಪ್ಪಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಏಜೆಂಟ್ ಗಳನ್ನ ಇಟ್ಟುಕೊಂಡಿರಲಿಲ್ಲ
2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಐದು ಟೌನ್‌ಶಿಪ್‌ಗಳನ್ನು ಮಾಡಬೇಕು ಎಂದು ನಿರ್ಧಾರ ಮಾಡಿದ್ದು ನಿಜ. ಆದರೆ ನಾನು ನಿಮ್ಮಂತೆ ಯಾವುದೇ ಏಜೆಂಟ್ ಮೂಲಕ ಕೆಲಸ ಮಾಡಿಲ್ಲ. ಬೆಂಗಳೂರಿನ ರಿಂಗ್ ರೋಡ್ ಮತ್ತು ಟೌನ್‌ಶಿಪ್‌ಗಳ ಮೂಲ ಕನಸುಗಾರ ನಾನೇ. ಆದರೆ ಇಂದು ನೀವು ಮಾಡುತ್ತಿರುವುದು ಅಭಿವೃದ್ಧಿಯಲ್ಲ, ಬದಲಾಗಿ ರೈತರನ್ನು ಸಂಕಷ್ಟಕ್ಕೆ ತಳ್ಳುವ ಕೆಲಸ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಿಡದಿ ಟೌನ್‌ಶಿಪ್ ಪಿತಾಮಹ ನಾನಲ್ಲ ಎಂದು ಹೇಳುವ ಮೂಲಕ ಡಿಕೆಶಿ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಸತ್ಯ ಶೋಧನಾ ವರದಿ ಜನರ ಮುಂದಿರಲಿ
ಡಿಕೆ ಶಿವಕುಮಾರ್ ಅವರ ಸುದ್ದಿಗೋಷ್ಠಿಯಲ್ಲಿ ಅವರ ಮುಖದಲ್ಲಿ ಪಾಪ ಪ್ರಜ್ಞೆ ಎದ್ದು ಕಾಣುತ್ತಿತ್ತು. ರೈತರ ಬಳಿ ಅಧಿಕಾರಿಗಳನ್ನು ನೇರವಾಗಿ ಕಳುಹಿಸುತ್ತಿರುವುದರ ಹಿಂದೆ ದೊಡ್ಡ ಹುನ್ನಾರವಿದೆ. ಸುದ್ದಿಗೋಷ್ಠಿಯಲ್ಲಿ ಸಚಿವ ಎಂಬಿ ಪಾಟೀಲ್ ಇದ್ದರು, ಆದರೆ ಹೆಚ್ ಕೆ ಪಾಟೀಲ್ ಅವರನ್ನು ಯಾಕೆ ಪಕ್ಕದಲ್ಲಿ ಕುರಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ ಹೆಚ್ ಡಿ ಕೆ, ಅಂದಿನ ಸಭೆಯ ಸತ್ಯ ಶೋಧನಾ ವರದಿಯನ್ನು ಕೂಡಲೇ ಜನರ ಮುಂದೆ ಇಡುವಂತೆ ಸವಾಲು ಹಾಕಿದ್ದಾರೆ.
ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಿಡದಿ ರೈತರನ್ನು ಬಲಿ ಕೊಡಲು ಸರ್ಕಾರ ಮುಂದಾಗಿದೆ. ತಾವು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿದ್ದೆ. ಆದರೆ ಇಂದು ಕೇವಲ ರಿಯಲ್ ಎಸ್ಟೇಟ್ ಲಾಭಕ್ಕಾಗಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ. ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರೈತರ ಹಿತ ಕಾಯಲು ಜೆಡಿಎಸ್ ಯಾವುದೇ ಹೋರಾಟಕ್ಕೂ ಸಿದ್ಧವಿದೆ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.








