ಟಿಕ್ ಟಾಕ್ ಗೆ ಸೆಡ್ಡು ಹೊಡೆಯಲು ಬಂದ ಮಿತ್ರೋ ಆಪ್ ನ ನಿಜ ಬಣ್ಣ ಬಯಲಾಗಿದ್ದು, ಇದು ಪಾಕಿಸ್ತಾನ ಮೂಲ ಹೊಂದಿದೆ ಎಂದು ತಿಳಿದು ಬಂದಿದೆ. ಮೇ 29 ರಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು, ನಾನು ಈಗಷ್ಟೇ ಐಐಟಿ ರೂರ್ಕಿಯ ಶಿವಾಂಕ್ ಅವರನ್ನ ಅಭಿನಂದಿಸಿದೆ. ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ಅವರು ಫೇಸ್ ಬುಕ್, ಟಿಕ್ ಟಾಕ್‌ಗೆ ಉತ್ತರವಾಗಿ ಮಿತ್ರೋ ಅನ್ನೋ ಆಪ್ ಕಂಡು ಹಿಡಿದಿದ್ದಾರೆ. ಅದು ಈಗಾಗಲೇ 50 ಲಕ್ಷಕ್ಕೂ ಅಧಿಕ ಬಾರಿ ಡೌನ್ ಲೋಡ್ ಆಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಅವರು ಅತ್ಯಂತ ಉತ್ಕೃಷ್ಟ ಕಾರ್ಯ ಮಾಡಿದ್ದಾರೆ ಎಂದಿದ್ದರು.
ಈ ಆಪ್ ಭಾರತ ಮೂಲದ್ದು ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ, ಸಾಕಷ್ಟು ಬಳಕೆದಾರರನ್ನು ಹೊಂದುವ ಮೂಲಕ ಟಿಕ್ ಟಾಕ್ ಗೆ ಪೈಪೋಟಿಯನ್ನು ನೀಡುತ್ತಿದೆ. ಆದ್ರೆ ಇದೀಗ ಮಿತ್ರೋ ಆಪ್ ಗೆ ಪಾಕಿಸ್ತಾನದ ಸಂಪರ್ಕವಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮಿತ್ರೋ ಆಪ್ ನ ಮೂಲ ಕೋಡ್ ಪಾಕಿಸ್ತಾನ ಟಿಕ್ ಟಿಕ್ ಆಪ್ ನದ್ದು ಎಂದು ಹೇಳಲಾಗಿದೆ.
ಭಾರತದಲ್ಲಿ ಶಾಪ್ ಕಿಲ್ಲರ್ ಇ-ಕಾಮರ್ಸ್ ಅನ್ನೋ ಸಂಸ್ಥೆ, ಮಿತ್ರೋ ಆಪ್ ನ ಪ್ರಮೋಟರ್ ಆಗಿದೆ. ಈ ಸಂಸ್ಥೆ ಐಐಟಿ ರೂರ್ಕಿಯ ಶಿವಾಂಕ್ ಅಗರ್ವಾಲ್ ಎಂಬುವವರು ಈ ಆಪ್ ಡೆವಲಪ್ ಮಾಡಿದ್ದಾರೆ ಅಂತಾ ಪ್ರಚಾರ ಮಾಡಿತ್ತು. ಆದ್ರೆ, ಮಿತ್ರೋ ಆಪ್ ಪಾಕಿಸ್ತಾನದ ಟಿಕ್ ಟಿಕ್ ಆಪ್ ನ ಮತ್ತೊಂದು ರೂಪವಾಗಿದೆ ಅನ್ನೋದು ಈಗ ಬಯಲಾಗಿದೆ. ಅಷ್ಟೇ ಅಲ್ಲ ಪಾಕಿಸ್ತಾನದ QBoxus ಅನ್ನೋ ಸಂಸ್ಥೆ ಈ ಆಪ್ ಡೆವಲಪ್ ಮಾಡಿದ್ದು, ಇದರ ಸೌರ್ಸ್ ಕೋಡ್ ಅನ್ನ ಕೇವಲ 2570 ಭಾರತೀಯ ರೂಪಾಯಿಗಳಿಗೆ ಖರೀದಿ ಮಾಡಲಾಗಿತ್ತು ಅಂತ ಸ್ವತಃ ಕ್ಯೂಬಾಕ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ ಇರ್ಫಾನ್ ಶೇಖ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಶಿವಾಂಕ್ ಅಗರ್ ವಾಲ್ ಆಗಲಿ ಅಥವಾ ಶಾಪ್ ಕಿಲ್ಲರ್ ಇ-ಕಾಮರ್ಸ್ ಆಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ ಅಥವಾ ಇದನ್ನು ಅಲ್ಲಗಳೆದಿಲ್ಲ. ಹೀಗಾಗಿ, ಸದ್ಯಕ್ಕಂತೂ ಈ ಆಪ್ ನ ಸೇಫ್ಟಿ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿದ್ದು, ನೀವು ನೀಡುವ ಪ್ರತಿ ವಿವರವೂ ಪಾಕಿಸ್ತಾನದ ಸರ್ವರ್ ನಲ್ಲಿ ಹೋಗಿ ಕುಳಿತುಕೊಳ್ಳುತ್ತವೆಯಾ? ಅನ್ನೋ ಅನುಮಾನವನ್ನೂ ಹುಟ್ಟುಹಾಕಿವೆ.








