ಹೊಸದಿಲ್ಲಿ, ಜೂನ್ 3 : ಭಾರತದಲ್ಲಿ ಚೀನಾ ಮೂಲದ ಟಿಕ್ ಟಾಕ್ ಗೆ ಸಡ್ಡು ಹೊಡೆದು ಐದು ಮಿಲಿಯನ್ ಗಿಂತಲೂ ಹೆಚ್ಚು ಗ್ರಾಹಕರು ಡೌನ್ಲೌಡ್ ಮಾಡಿದ್ದ ಮಿತ್ರೋ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹೊರಗೆ ಅಟ್ಟಿದೆ.
ಪ್ರಧಾನಿ ಮೋದಿ ಸ್ವದೇಶಿ ಉತ್ಪನ್ನಗಳನ್ನು ಬಳಸಿ ಎಂದು ಕರೆ ಮಾಡಿದ ಬಳಿಕ ಭಾರತೀಯರು ಮಿತ್ರೋ ಆ್ಯಪ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು ಅಲ್ಲದೇ ಚೀನಾದ ಟಿಕ್ ಟಾಕ್ ಆ್ಯಪ್ ವಿರುದ್ಧ ಟಿಕ್ಟಾಕ್ ಬ್ಯಾನ್ ಮಾಡಿ, ಸ್ವದೇಶದ ಮಿತ್ರೋ ಬಳಸಿ ಅಭಿಯಾನ ಪ್ರಾರಂಭಿಸಿದ್ದರು.
ಇದರ ಪರಿಣಾಮವಾಗಿ ಕೇವಲ ಒಂದು ತಿಂಗಳಲ್ಲಿ ಐದು ಮಿಲಿಯನ್ ಭಾರತೀಯರು ಮಿತ್ರೋ ಆ್ಯಪ್ ಡೌನ್ಲೌಡ್ ಮಾಡಿ ಕೊಂಡಿದ್ದರು. ಭಾರತದ ಶಾಪ್ ಕಿಲ್ಲರ್ ಇ- ಕಾಮರ್ಸ್ ಎನ್ನುವ ಸಂಸ್ಥೆ ಇದರ ಪ್ರಮೋಟರ್ ಆಗಿದ್ದು, ರೂರ್ಕಿಯ ಶಿವಾಂಕ್ ಅಗರ್ವಾಲ್ ಈ ಆ್ಯಪ್ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಅಷ್ಟರಲ್ಲಿ ಮಿತ್ರೋ ಆ್ಯಪ್ ಭಾರತದಲ್ಲ. ಪಾಕಿಸ್ತಾನದ ಸಂಸ್ಥೆ ಅಭಿವೃದ್ಧಿ ಪಡಿಸಿರುವುದನ್ನು ಖರೀದಿಸಲಾಗಿದೆ ಅಷ್ಟೇ ಎಂಬ ವಿಷಯ ಹೊರಬಿತ್ತು. ಈ ವಿಷಯ ಚರ್ಚೆಯಾಗುತ್ತಿದ್ದಂತೆ ಭಾರತದಲ್ಲಿ ಜನರು ಮಿತ್ರೋ ಆ್ಯಪ್ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಮಿತ್ರೋ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಿಂದಲೂ ಹೊರಗೆ ದಬ್ಬಲ್ಪಟ್ಟಿದೆ.
ಪಾಕಿಸ್ತಾನದ ಕ್ಯೂಬಾಕ್ಸಸ್ ಸಂಸ್ಥೆಯು ಮೊದಲು ಟಿಕ್ ಟಿಕ್ ಎಂಬ ಆ್ಯಪ್ ಅಭಿವೃದ್ಧಿ ಪಡಿಸಿ ಅದರ ಆ್ಯಪ್ ನ ಮೂಲ ಕೋಡ್ ಅನ್ನು ಮಾರಾಟಕ್ಕೆ ಇಟ್ಟಿತು. ಅದನ್ನು ಕೇವಲ 2600 ರೂಪಾಯಿಗಳಿಗೆ ಖರೀದಿಸಿ, ಟಿಕ್ ಟಿಕ್ ಆ್ಯಪ್ ನ ಲೋಗೋ ತೆಗೆದು ಮಿತ್ರೋ ಎಂದು ಹೊಸ ನಾಮಕರಣ ಮಾಡಿ, ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ಕ್ಯೂಬಾಕ್ಸಸ್ ಸಂಸ್ಥೆ ಸ್ಪಷ್ಟನೆ ನೀಡಿತು.
ಮೂಲ ವಿಷಯವನ್ನು ನಕಲು ಮಾಡುವುದು ಮತ್ತು ಅದರ ಮೌಲ್ಯವನ್ನು ಅನುಸರಿಸುವುದನ್ನು ಗೂಗಲ್ ನಿಯಮ ಅನುಮೋದಿಸುವುದಿಲ್ಲ. ಹಾಗಾಗಿ ಗೂಗಲ್ ನಿಯಮಗಳನ್ನು ಮಿತ್ರೋ ಆ್ಯಪ್ ಉಲ್ಲಂಘನೆ ಮಾಡಿದ ಕಾರಣಕ್ಕೆ ಪ್ಲೇ ಸ್ಟೋರ್ನಿಂದ ಹೊರಗೆ ಅಟ್ಟಿದೆ. ಮಿತ್ರೋ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಲಾಗಿರುವ ಐಐಟಿ ರೂರ್ಕಿಯ ಶಿವಾಂಕ್ ಇಲ್ಲಿಯವರೆಗೂ ಪ್ರತಿಕ್ರಿಯೆಗೆ ಸಿಕ್ಕಿಲ್ಲ.








