ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದೆ : ಯತ್ನಾಳ್
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದು ಸ್ಮಾರ್ಟ್ ಆಗಿದ್ದೇನೆ. ಗಡ್ಡ ಬಿಟ್ಟಾಗ ಶಿವಾಜಿ ಆಗಿದ್ದೆ, ಈಗ ಬಸವಣ್ಣ ಆಗಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮೊದಲಿನಿಂದಲೂ ಹೇಳಿಕೆಗಳನ್ನು ಕೊಡುತ್ತಿದ್ದ ಯತ್ನಾಳ್, ಸಾಕಷ್ಟು ಭಾರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ ಈ ಬಾರಿ ಆಗಸ್ಟ್ 15ಕ್ಕೆ ಹೊಸ ಮುಖ್ಯಮಂತ್ರಿ ಬಾವುಟ ಹಾರಿಸಲಿದ್ದಾರೆ ಎಂದು ಕೆಲ ದಿನಗಳಿಂದೆ ಹೇಳಿಕೆ ನೀಡಿದ್ದರು.
ಇಂದು ರಾಜ್ಯದಲ್ಲಿ ಸಿಎಂ ಬದಲಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣವಚನ ತೆಗೆದುಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನೂ ಎಂದೂ ಮುಖ್ಯಮಂತ್ರಿ, ಸಚಿವ ಸ್ಥಾನಕ್ಕಾಗಿ ಯಾರ ಮನೆಯ ಬಾಗಿಲು ತಟ್ಟಿಲ್ಲ. ಈ ಹಿಂದೆಯೂ ಇದೇ ಹೇಳಿಕೆಯನ್ನು ಹಲವು ಬಾರಿ ನೀಡಿದ್ದು, ನಾನು ಆಡಿದ ಮಾತುಗಳಿಗೆ ಮುಂದೆಯೂ ಬದ್ಧವಾಗಿರುತ್ತೇನೆ ಎಂದು ತಾವು ಸಚಿವಸ್ಥಾನ ಆಕಾಂಕ್ಷಿ ಅಲ್ಲ ತಿಳಿಸಿದರು.
ಇನ್ನು ಬೊಮ್ಮಾಯಿ ಅವರು ಭ್ರಷ್ಟಾಚಾರ ಮುಕ್ತ ಮತ್ತು ಹಿಂದುತ್ವ ಪರವಾದ ಕೆಲಸಗಳನ್ನು ಮಾಡಿದ್ರೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ ಯತ್ನಾಳ್, ಬೊಮ್ಮಾಯಿ ಅವರು ಒಬ್ಬರ ರಬ್ಬರ್ ಸ್ಟ್ಯಾಂಪ್ ಅಂತ ಕೆಲವರು ಹೇಳ್ತಾರೆ. ಆದ್ರೆ ಅದು ಸಾಧ್ಯವಿಲ್ಲ. ಬೊಮ್ಮಾಯಿ ಬಹಳ ಬುದ್ಧಿವಂತರಾಗಿದ್ದು, ಗೃಹ ಸಚಿವರಾಗಿದ್ದಾಗ ಹಲವು ಬಾರಿ ಭೇಟಿಯಾಗಿದ್ದೇನೆ. ಸಚಿವರಾಗಿದ್ದಾಗಲೂ ಎಲ್ಲ ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಮುಂದೆ ಯಾರ ನೆರಳಿನ ರೀತಿಯಲ್ಲಿ ಕೆಲಸ ಮಾಡಲ್ಲ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದರು.