ಸಿಎಂ ಭೇಟಿಯಾದ ಶಾಸಕ ಹರೀಶ್ ಪೂಂಜಾ ಮತ್ತು ಮಾಜಿ ಶಾಸಕ ವಸಂತ ಬಂಗೇರಾ.. ಎಲ್ಲವೂ ಓಡಿಲ್ನಾಳ ಮಹಾಲಿಂಗೇಶ್ವರನ ಕೃಪೆ…!
ಇದೊಂದು ಅಪರೂಪದ ಕ್ಷಣ.. ಹಾಲಿ ಮತ್ತು ಮಾಜಿ ಶಾಸಕರು ಜೊತೆಯಾಗಿ ಸಿಎಂ ಅವರನ್ನು ಭೇಟಿಯಾದ ಘಟನೆ.. ಇದರಲ್ಲಿ ಏನು ಅಚ್ಚರಿ ಅಂತೀರಾ ಅದೇ ಇರೋದು…
ಸಿಎಂ ಹಾಗೂ ಹಾಲಿ ಶಾಸಕರು ಒಂದೇ ಪಕ್ಷದವರು. ಮಾಜಿ ಶಾಸಕರು ಕಾಂಗ್ರೆಸ್ ನವರು. ಆದ್ರೆ ಮಾಜಿ ಶಾಸಕರು ಒಂದು ಕಾಲದಲ್ಲಿ ಜನತಾ ಪಾರ್ಟಿಯಲ್ಲಿದ್ದವರು. ಅಷ್ಟೇ ಅಲ್ಲ, 1980 ದಶಕದಲ್ಲಿ ಜನತಾ ಪಾರ್ಟಿಯಿಂದ ಆಯ್ಕೆಯಾಗಿ ಬಿಎಸ್ ವೈ ಜೊತೆಗಿದ್ದವರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರ.
ಅಂದ ಹಾಗೇ ಮಾಜಿ, ಹಾಲಿ ಶಾಸಕರು ಸಿಎಂ ಭೇಟಿಯಾಗೋಕೆ ಕೃಪೆ ತೋರಿಸಿದ್ದು ಓಡಿಲ್ನಾಳ ಕಿರಾತ ಮೂರ್ತಿ ಮಹಾಲಿಂಗೇಶ್ವರ.
ಹೌದು, ಬೆಳ್ತಂಗಡಿ ತಾಲೂಕಿನ ಒಡಿಲ್ನಾಳ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ ನಡೆಯುತ್ತಿದೆ. ಐತಿಹಾಸಿಕ ಹಿನ್ನಲೆ ಇರುವಂತಹ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ನೀಡುವಂತೆ ಸಿಎಂ ಬಿಎಸ್ ವೈ ಅವರ ಬಳಿ ಹಾಲಿ ಶಾಸಕ ಹರೀಶ್ ಪೂಂಜ ಮತ್ತು ಮಾಜಿ ಶಾಸಕ ವಸಂತ ಬಂಗೇರ ಅವರು ಜೊತೆಯಾಗಿ ಮನವಿ ಮಾಡಿದ್ದರು.
ಹಾಲಿ ಮತ್ತು ಮಾಜಿ ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ ತಕ್ಷಣವೇ 50 ಲಕ್ಷ ರೂಪಾಯಿ ನೀಡುವಂತೆ ಆದೇಶ ನೀಡಿದ್ದಾರೆ. ಅಂದ ಹಾಗೇ ಓಡಿಲ್ನಾಳ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಮಾಜಿ ಶಾಸಕ ವಸಂತ ಬಂಗೇರ ಅವರು ಅಧ್ಯಕ್ಷರಾಗಿದ್ದಾರೆ.
ಒಟ್ಟಿನಲ್ಲಿ ದೇವಸ್ಥಾನದ ಅನುದಾನದ ವಿಚಾರವಾಗಿ ಪಕ್ಷ ಭೇದ ಮರೆತು ಜೊತೆಯಾಗಿ ಹಾಲಿ ಮತ್ತು ಮಾಜಿ ಶಾಸಕರು ಅನುದಾನ ತರುವಲ್ಲಿ ಯಶಸ್ವಿಯಾದ್ರು.
ವಸಂತ ಬಂಗೇರಾ ಅವರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಜನತಾ ಪಾರ್ಟಿ, ಜನತಾ ದಳ, ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹರೀಶ್ ಪೂಂಜಾ ವಿರುದ್ಧ ಸೋಲು ಅನುಭವಿಸಿದ್ದರು.







