ಬೆಂಗಳೂರು: ಜಾತಿನಿಂದನೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರಾಗಿದೆ.
ವಾದ, ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿತ್ತು. ಇಂದು ಎರಡು ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ, ಪೊಲೀಸರು ವಿಚಾರಣೆಗೆ ಕರೆದಾಗ ಹಾಜರಾಗಬೇಕೆಂದು ಕೋರ್ಟ್ ಷರತ್ತು ವಿಧಿಸಿ, ಜಾಮೀನು ಮಂಜೂರು ಮಾಡಿದೆ.
ಆದರೆ, ಜಾಮೀನು ಸಿಕ್ಕರೂ ಮುನಿರತ್ನಗೆ ಆತಂಕ ಮನೆ ಮಾಡಿದೆ. ಮತ್ತೊಂದು ಸಂಕಷ್ಟ ಶುರುವಾಗಿದ್ದು, ಮತ್ತೆ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಸಂಕಷ್ಟ ಮನೆ ಮಾಡಿದೆ. ಬುಧವಾರ ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ, ಆರೇಳು ವರ್ಷದ ಹಳೆಯ ಪ್ರಕರಣ. ಚಲುವರಾಜು ಉಪಸ್ಥಿತಿಯಲ್ಲಿ ಆದ ಘಟನೆ. ಸಾರ್ವಜನಿಕರ ಮುಂದೆ ನಡೆದ ನಿಂದನೆ ಅಲ್ಲ ಎಂದು ವಾದಿಸಿದ್ದಾರೆ. ಆದರೆ, ಈಗ ಜನಾಂಗಿಯ ನಿಂದನೆ, ಪ್ರಚೋದನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗುವುದಿಲ್ಲ. ಈ ಸೆಕ್ಷನ್ ಪ್ರಕಾರ ನಿಂದನೆ ಮಾಡುವಾಗ ಇಬ್ಬರಿಗಿಂತ ಹೆಚ್ಚು ಜನ ಇರಬೇಕು. ಗುಂಪಿನಲ್ಲಿ ಜಾತಿನಿಂದನೆ ಮಾಡಿರಬೇಕು. ಇಲ್ಲಿ ಚಲುವರಾಜುನೇ ನಿಜವಾದ ಆರೋಪಿ ಎಂದು ವಾದಿಸಿದ್ದಾರೆ.
ರಾಜಕೀಯ ಕಾರಣಕ್ಕಾಗಿಯೇ ಮುನಿರತ್ನ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈಗಾಗಲೇ ಆರೋಪಿಯ ವಾಯ್ಸ್ ಸ್ಯಾಂಪಲ್ ಸಂಗ್ರಹ ಮಾಡಿ ಆಗಿದೆ. ಸಾಕ್ಷಿದಾರರ ಹೇಳಿಕೆಯೂ ದಾಖಲಾಗಿದೆ. ಪ್ರಭಾವ ಬೀರಲು ಸಾಧ್ಯವಿಲ್ಲ. ಜಾಮೀನು ನೀಡಬಹುದು ಎಂದು ವಕೀಲರು ಮನವಿ ಮಾಡಿದ್ದರು.