ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ನವರಿಗೆ ಇಲ್ಲ – ಈಶ್ವರಪ್ಪ
ಡಿಕೆಶಿ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕೆಟ್ಟದಾಗಿ ಮಾತನಾಡಿದ ಎಂ.ಎ ಸಲೀಂ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದ್ರೆ ಅದೇ ವೇಳೆ ನಡೆದ ಸಂಭಾಷಣೆಯಲ್ಲಿ ಸಲೀಂ ಜೊತೆ ಭಾಗೀದಾರನಾಗಿದ್ದ ವಿ ಎಸ್ ಉಗ್ರಪ್ಪ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಏಕೆ ಏನೂ ಮಾತನಾಡುತ್ತಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಅವರು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ನೇರವಾಗಿ ಕೆಪಿಸಿಸಿ ಅಧ್ಯಕ್ಷರ ಪರ್ಸೆಂಟೇಜ್ ಲೆಕ್ಕಾಚಾರದ ಬಗ್ಗೆ ಅವರದೇ ಪಕ್ಷದ ಮುಖಂಡರು ಮಾತನಾಡಿದರೂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಲ್ಲಿ ಸ್ಪಷ್ಟವಾಗಿ ರಾಜಕೀಯವಿದೆ. ತಾವು ಮುಸ್ಲಿಮರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನವರು ಅಲ್ಪಸಂಖ್ಯಾತ ಸಮುದಾಯದ ನಾಯಕನಿಗೆ ಮಾತ್ರ ಶಿಕ್ಷೆ ಕೊಡುವುದು ಎಷ್ಟು ಸರಿ. ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತನಾಡುವ ಸಿದ್ದರಾಮಯ್ಯ ಯಾಕೆ ಮೌನ ವಹಿಸಿದ್ದಾರೆ ಎಂದು ಹೇಳಿದರು. ಶಿಸ್ತು ಕ್ರಮ ಕೈಗೊಳ್ಳುವಲ್ಲಿನ ತಾರತಮ್ಯದ ಬಗ್ಗೆ ಸಿದ್ದರಾಮಯ್ಯ ಮಾತನಾಡಬೇಕು. ಮೌನ ತಾಳಿದರೆ ಒಪ್ಪಿಗೆ ನೀಡಿದಂತೆ ಎಂದಿದ್ದಾರೆ.
ಇದೇ ವೇಳೆ ‘ಮೋದಿ ಹೆಬ್ಬೆಟ್ಟು ಗಿರಾಕಿ” ಎಂಬ ಕಾಂಗ್ರೆಸ್ ಟ್ವೀಟ್ ಬಗ್ಗೆ ಮಾತನಾಡಿದ ಅವರು ಇದು ಒಳ್ಳೆಯ ಬೆಳವಣಿಗೆ ಅಲ್ಲ. ಎಲ್ಲ ದೇಶದವರು ಮೋದಿಯವರನ್ನು ಬಂಗಾರ ಅಂತಿದ್ದಾರೆ. ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ. ಅಂದು ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಅವರು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆ ಎಂದು ಬಣ್ಣಿಸಿದ್ದರು. ಈಗ ಪ್ರಧಾನಿ ಮೋದಿ ಅವರನ್ನು ನಿಂದಿಸುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.