ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಲ್ಲಿ ರೋಡ್ ಶೋ ನಡೆಸಿದ್ದು, ಕಡಲನಗರಿ ಜನರು ಫುಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸಾರ್ವಜನಿಕ ಸಭೆ ಉದ್ಧೇಶಿಸಿ ಮಾತನಾಡಿದನ ನಂತರ ಅವರು, ಕಡಲನಗರಿಗೆ ಆಗಮಿಸಿದ್ದಾರೆ. ನಗರದಲ್ಲಿನ ನಾರಾಯಣ ಗುರು ಸರ್ಕಲ್ ನಿಂದ ಅವರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋ ಸಂದರ್ಭದಲ್ಲಿ ಎರಡೂ ಇಕ್ಕೆಲಗಳಲ್ಲಿ ಜನಸಾಗರ ತುಂಬಿತ್ತು. ಪ್ರತಿಯೊಬ್ಬರೂ ಮೋದಿಗೆ ಪುಷ್ಪ ವೃಷ್ಟಿಗೈದರು. ಈ ವೇಳೆ ಮೋದಿ ಜನರತ್ತ ಕೈ ಬೀಸಿದರು.
ಅಭಿಮಾನಿಗಳ ಪ್ರೀತಿ ಕಂಡ ಪ್ರಧಾನಿ ಮೋದಿ, ಕಾರ್ಯಕರ್ತರತ್ತ ಹೂ ಎಸೆದು ಖುಷಿ ವ್ಯಕ್ತಪಡಿಸಿದರು. ಜೊತೆಗೆ ಕಮಲದ ಚಿಹ್ನೆ ತೋರಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ರಸ್ತೆಯುದ್ಧಕ್ಕೂ ಹುಲಿವೇಷ, ಯಕ್ಷಗಾನ, ಕಂಬಳ, ಭರತನಾಟ್ಯ ಹೀಗೆ ತುಳು ಸಂಸ್ಕೃತಿಗಳು ಮೀಳೈಸಿದವು. ಪ್ರಧಾನಿ ಅವರಿಗೆ ಎರಡು ಕ್ಷೇತ್ರಗಳ ಅಭ್ಯರ್ಥಿಗಳು ಸಾಥ್ ನೀಡಿದರು. ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಇದ್ದರು.