#modi_rojgar_do | `ಪ್ರಧಾನ್ ಸೇವಕ್’ ವಿರುದ್ಧ ಡಿಜಿಟಲ್ ಸ್ಟ್ರೈಕ್

1 min read

#modi_rojgar_do | `ಪ್ರಧಾನ್ ಸೇವಕ್’ ವಿರುದ್ಧ ಡಿಜಿಟಲ್ ಸ್ಟ್ರೈಕ್

#modi_rojgar_do …! ಕೆಲದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ವಿಷಯ ಇದು. #modi_rojgar_do ಅಂದ್ರೆ ಮೋದಿ ಕೆಲಸ ಕೊಡಿ ಅಂತಾ ಅರ್ಥ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗಿರುವ #modi_rojgar_do ಚಳವಳಿಯನ್ನ ನಾವು ನೀವು ಯಾವುದೇ ಪಕ್ಷದ ಹಿನ್ನಲೆಯಲ್ಲಿ ಆಗಲಿ.. ಅಥವಾ ಯಾವುದೋ ಪಕ್ಷದ ಕಾರ್ಯಕರ್ತರಾಗಲಿ ನೋಡುವುದನ್ನ ಬಿಟ್ಟ ಒಂದು ಸಾಮಾಜಿಕ ಸಮಸ್ಯೆಯಾಗಿ ಅಷ್ಟೆ ನೋಡಬೇಕಾಗಿದೆ.

modi_rojgar_do
ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಡಿಜಿಟಲ್ ಸ್ಟ್ರೈಕ್ ಗೆ ಕಾರಣ ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ.. ಹೌದು..! ಸುಮಾರು ವರ್ಷಗಳಿಂದ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ವಿದ್ಯಾಭ್ಯಾಸ ಮುಗಿಸಿದ ಯುವಜನತೆ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ದೇಶದಲ್ಲಿ ಈ ಸಮಸ್ಯೆ ಇದ್ದರೂ ಕೂಡ ಈಗ ಆಳುತ್ತಿರುವ ಪಕ್ಷವಾಗಲಿ, ಈ ಹಿಂದೆ ನಮ್ಮನ್ನ ಆಳಿದ ಪಕ್ಷಗಳಲಾಗಲಿ ಈ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಅನ್ನೋ ದುರಂತ.

ಇನ್ನ ನಮಗೆಲ್ಲರಿಗೂ ತಿಳಿದಿರುವಂತೆ ಭಾರತ ಅತಿ ಹೆಚ್ಚು ಯುವಶಕ್ತಿಯನ್ನ ಹೊಂದಿರುವ ದೇಶ. ಆದ್ರೆ ನಮ್ಮನ್ನ ಆಳಿದ ಆಳುತ್ತಿರುವ ಯಾವುದೇ ಸರ್ಕಾರಗಳಾಗಲಿ ಈ ಯುವಜನತೆಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ಯಾವುದೇ ಪ್ರಮಾಣಿಕ ಪ್ರಯತ್ನ ಮಾಡಿಲ್ಲ ಮಾಡುತ್ತಿಲ್ಲ. ಪಾಪ ನಾವು ಪಕ್ಷಗಳನ್ನ ರಾಜಕಾರಣಿಗಳನ್ನ ದೂಷಿಸುವ ಕಾರಣವೇನಿದೆ, ಅವರನ್ನ ಆಯ್ಕೆ ಮಾಡಿಕಳಿಸುತ್ತಿರೋದು ನಾವೇ ಅಲ್ವಾ..? ಇದು ಹೋಗ್ಲಿ ಬಿಡಿ… ಇಲ್ಲಿ ಇನ್ನೊಂದು ವಿಚಾರವೇನಂದ್ರೆ ಕಳೆದ 20 ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ಜಗತ್ತು ಯಾರು ಊಹಿಸದಷ್ಟು ಮುಂದೆ ಹೋಗಿದೆ. ಆದ್ರೆ ನಮ್ಮಲ್ಲಿ ಈ 20 ವರ್ಷಗಳಿಂದ ಯುವಜನತೆಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಅನ್ನೋ ಅಂಕಿಅಂಶಗಳು ಸಾರಿ ಹೇಳುತ್ತಿವೆ.

ಅಂದಹಾಗೆ ಸದ್ಯ ದೇಶದಲ್ಲಿ ಕೊರೊನಾ, ಲಾಕ್ ಡೌನ್, ಒಂದಿಷ್ಟು ಸರ್ಕಾರದ ನೀತಿಗಳಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಲಾಕ್ ಡೌನ್ ಬಳಿಕ ಅನೇಕ ಕಂಪನಿಗಳಲ್ಲಿ ನಷ್ಟದ ಹೆಸರೇಳಿ ಕೆಲಸಗಾರನ್ನ ಮನೆಗೆ ಕಳುಹಿಸುವ ಪ್ರಯತ್ನ ದೇಶದಾದ್ಯಂತ ಭರ್ಜರಿಯಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದವರು ಮಾತ್ರ, ಉದ್ಯಮ ನಡೆಸುವುದು ನಮ್ಮ ಕೆಲಸವಲ್ಲ ಅಂತಾ ಜಾರಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಸೆಂಟರ್ ಫ್ರಂ ಮಾನಿಟರಿಂಗ್ ಇಂಡಿಯನ್ ಎಕೊನಾಮಿ (ಸಿಎಂಐಇ) ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ಸಮೀಕ್ಷಾ ವರದಿಯನ್ನ ಬಿಡುಗಡೆ ಮಾಡಿದೆ. ಅದರಂತೆ 2019 -2020 ರಲ್ಲಿ ಸುಮಾರು 40 ಕೋಟಿ 30 ಲಕ್ಷ ಜನ ಉದ್ಯೋಗಿಗಳಾಗಿದ್ದರು ಮತ್ತು ಮೂರುವರೆ ಕೋಟಿ ಜನ ನಿರುದ್ಯೋಗಿಗಳಾಗಿ ಗುರುತಿಸಿಕೊಂಡಿದ್ದರು. ನಿರುದ್ಯೋಗಿಗಳ ಈ ಪಟ್ಟಿಗೆ ಪ್ರತಿ ವರ್ಷ ಒಂದಿಷ್ಟು ಮಂದಿ ಸೇರಿಕೊಳ್ಳುತ್ತಾರೆ. ಕಳೆದ ವರ್ಷ ಕೊರೊನಾದಿಂದಾಗಿ ಇದರ ಸಂಖ್ಯೆ ಹೆಚ್ಚಾಗಿದೆ ಅಂತಾ ವರದಿ ಹೇಳಿದೆ.

modi_rojgar_do

ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗ ಹೊಸ ಸೃಷ್ಟಿ ಇರಲಿ, ಉದ್ಯೋಗಿಗಳ ಸಂಖ್ಯೆ ಕೂಡ ಕಡಿಮೆ ಇದೆಯಂತೆ. 201617ರಲ್ಲಿ 407.3 ಮಿಲಿಯನ್ ಇದ್ದ ಉದ್ಯೋಗಿಗಳ ಸಂಖ್ಯೆ 2018-19ಕ್ಕೆ 400 ಮಿಲಿಯನ್ ಗೆ ಇಳಿಕೆಯಾಗಿದೆ ಅಂತಾ ವರದಿ ತಿಳಿಸಿದೆ. ಇದರಿಂದ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ.

ಇಲ್ಲಿ ನಾವೆಲ್ಲಾ ತಿಳಿದುಕೊಳ್ಳಬೇಕಾದ ಮತ್ತೊಂದು ವಿಷಯ ಏನಂದ್ರೆ ಭಾರತದ ಜನಸಂಖ್ಯೆ ಆಧಾರದಲ್ಲಿ ದೇಶದಲ್ಲಿ ಪ್ರತಿವರ್ಷ 2 ಕೋಟಿ ಮಂದಿಗೆ ಉದ್ಯೋಗ ಸೃಷ್ಠಿಯಾಗಬೇಕಾಗುತ್ತದೆ. ಇದು ನಡೀತಿದ್ಯಾ..? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ.

ಹೌದು..! ನಮ್ಮಲ್ಲಿ ಉದ್ಯೋಗ ಸೃಷ್ಟಿ ಎರಡು ರೀತಿ ಆಗಬೇಕು. ಒಂದು ಸರ್ಕಾರಿ ನೌಕರಿ ಮತ್ತೊಂದು ಖಾಸಗಿ ನೌಕರಿ. ಆದ್ರೆ ಈ ಎರಡುವಲಯಗಳಲ್ಲೂ ಉದ್ಯೋಗ ಸೃಷ್ಠಿ ಆಗುತ್ತಿಲ್ಲ.

ಸರ್ಕಾರಿ ನೌಕರಿ ಅನ್ನೋ ಸದ್ಯ ಕಬ್ಬಿಣದ ಕಡಲೆಯಾಗಿದೆ. ಸರ್ಕಾರಿ ಕೆಲಸ ದೇವರ ಕೆಲಸವಾಗಿರುವುದರಿಂದ ಅಲ್ಲಿ ಹುಂಡಿಗೆ ಕಾಣಿಕೆ ಹಾಕಿಲ್ಲ ಅಂದ್ರೆ ಕೆಲಸ ನಡೆಯೋದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಡ ನಿರುದ್ಯೋಗ ಯುವಕ- ಯುವತಿಯರು ಅದ್ಹೇಗೆ ತಾನೆ ಉದ್ಯೋಗಿಗಳಾಗುತ್ತಾರೆ. ಇನ್ನು ಖಾಸಗಿ ವಲಯದ ವಿಷಯಕ್ಕೆ ಬಂದ್ರೆ ಇಲ್ಲೂ ಕೂಡ ಹೇಳಿಕೊಳ್ಳುವಂತಹ ಉದ್ಯೋಗ ಸೃಷ್ಠಿಯಾಗುತ್ತಿಲ್ಲ. ಇದೆಲ್ಲಾ ಬೇಡ ಸ್ವಾಮಿ, ನಾವೇ ಏನೋ ಒಂದು ಕೆಲಸ ಮಾಡ್ಕೋತೀವಿ. ಸ್ವಯಂ ಉದ್ಯೋಗ ಮಾಡಿಕೊಳ್ಳೋಣ ಅಂದ್ರೆ ಅದಕ್ಕೆ ಬಂಡವಾಳವೇ ಸಿಗಲ್ಲ. ದೇಶದಲ್ಲಿ ಗಲ್ಲಿ ಗಲ್ಲಿಗೂ ಬ್ಯಾಂಕ್ ಗಳಿದ್ದರೂ ಯುವಜನತೆಗೆ ಲೋನ್ ಮಾತ್ರ ಮರೀಚಿಕೆ. ಸ್ವಾಮಿ ನಮಗೆ ಒಂದಿಷ್ಟು ಸಾಲ ಕೊಡಿ ನಮ್ಮ ಜೀವನವನ್ನ ಹೇಗೋ ಸಾಗಿಸ್ತೀವಿ ಅಂತಾ ಬ್ಯಾಂಕ್ ನಲ್ಲಿ ಲೋನ್ ಗೆ ಅಪ್ಲೆ ಮಾಡಿದ್ರೆ ಅಲ್ಲಿ ನೂರೆಂಟು ಕಾನೂನುಗಳು. ಲೋನ್ ಸಿಗುವಷ್ಟರಲ್ಲಿ ಬರುವ ಲೋನ್ ಹಣದಷ್ಟೆ ನಮ್ಮ ಕಾಸು ಖರ್ಚಾಗಿರುತ್ತೆ. ಇತಂಹ ಪರಿಸ್ಥಿತಿಯಲ್ಲಿ ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗದೇ ಮತ್ತೇನಾಗುತ್ತೆ ಅಲ್ವಾ.

modi_rojgar_do

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ #modi_rojgar_do ವಿಚಾರಕ್ಕೆ ಬಂದ್ರೆ ಟ್ವಿಟ್ಟರ್ ನಲ್ಲಿ ಶುರುವಾಗಿರುವ ಈ ಅಭಿಯಾನಕ್ಕೆ ರಾಜಕೀಯ ಕೆಸರನ್ನ ಎರಚಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ಅಂತಾ ಟೀಕೆ ಮಾಡಲಾಗುತ್ತಿದೆ.

ಒಟ್ಟಾರೆ #modi_rojgar_do ಅಭಿಯಾನ ರಾಜಕೀಯ ಪ್ರೇರಿತವೋ ಅಲ್ಲವೋ ಗೊತ್ತಿಲ್ಲ. ಆದ್ರೆ ನಿರುದ್ಯೋಗ ಸಮಸ್ಯೆ ಇದೆ ಅನ್ನೋ ನೂರಕ್ಕೆ ನೂರರಷ್ಟು ಸತ್ಯ. ಹೀಗಾಗಿ ನಮ್ಮನ್ನ ಆಳುತ್ತಿರುವ ನಾಯಕರು ರಾಜಕೀಯದಲ್ಲೇ ಮುಳುಗಿ ಒದ್ದಾಡೋದನ್ನ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಅನ್ನೋದು ನಮ್ಮ ಕಳಕಳಿ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd