ನವದೆಹಲಿ : ಇಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ. ಈ ಹಿನ್ನೆಲೆ ಅವರಿಗೆ ಹಲವು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡುವ ಮೂಲಕ ಮೋದಿಗೆ ಶುಭಾಶಯಗಳನ್ನು ಕೋರಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಅವರು ಚುರುಕು ನಾಯಕತ್ವ, ದೃಢ ನಿರ್ಧಾರ, ನಿರ್ಣಾಯಕ ಕ್ರಮದಿಂದ ಭಾರತ ಸಾಕಷ್ಟು ಲಾಭ ಗಳಿಸಿದೆ. ಬಡವರು ಹಾಗೂ ನಿರ್ಗತಿಕರ ಸಬಲೀಕರಣಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ರಾಷ್ಟ್ರಕ್ಕೆ ಅಪಾರ ಪ್ರಯೋಜನವಾಗಿದೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾವಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರ ಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.