ಪುತ್ರನ ರಾಮಸೇವೆ ಕಂಡು ಕೃತಾರ್ಥರಾದ ಪ್ರಧಾನಿ ಮೋದಿ ತಾಯಿ
ಗುಜರಾತ್, ಅಗಸ್ಟ್ 5: ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆ ಸಮಾರಂಭವನ್ನು ನೆರವೇರಿಸಿದರು. ಈ ಕ್ಷಣಕ್ಕೆ ಸಾಕ್ಷಿಯಾಗಲು ಲಕ್ಷಾಂತರ ಜನರು ತಮ್ಮ ಟಿವಿ ಪರದೆ ಮುಂದೆ ಕುಳಿತು ಆ ಅಮೋಘ ಕ್ಷಣವನ್ನು ಕಣ್ತುಂಬಿಕೊಂಡರು. ಅವರಲ್ಲಿ ನಮ್ಮ ಪ್ರಧಾನಿ ಮೋದಿಯವರ ತಾಯಿ ಹಿರಾಬೆನ್ ಕೂಡ ಒಬ್ಬರು. ಹಿರಾಬೆನ್ ತಮ್ಮ ಮನೆಯಲ್ಲಿ ಕೂತು ಮಗ ಭೂಮಿ ಪೂಜೆ ನೆರವೇರಿಸುವುದರ ಪ್ರಸಾರವನ್ನು ನೋಡಿ ಸಂತಸ ಪಟ್ಟರು.
ಬಹಳಷ್ಟು ಸಮಯಗಳಿಂದ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಹಿರಾಬೆನ್ ತನ್ನ ಮಗ ಭೂಮಿ ಪೂಜೆ ನೆರವೇರಿಸುವುದನ್ನು ಕಂಡು ರೋಮಾಂಚಿತರಾಗಿದ್ದರು. ಅತ್ತ ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸುತ್ತಿದ್ದರೆ ಇತ್ತ ಅವರ ತಾಯಿ ಹಿರಾಬೆನ್ ಎರಡು ಕೈಯನ್ನು ಭಕ್ತಿಯಿಂದ ಜೋಡಿಸಿ ಟಿವಿ ಪರದೆಯಲ್ಲಿ ಪೂಜೆಯ ವಿಧಿ ವಿಧಾನಗಳನ್ನು ವೀಕ್ಷಿಸುತ್ತಾ ಸಂತೋಷ ಪಟ್ಟರು.
ಭೂಮಿ ಪೂಜೆ ನೆರವೇರಿಸಿದ ಬಳಿಕ ಈ ಐತಿಹಾಸಿಕ ದಿನದ ನೆನಪಿಗೆ ಮೋದಿಯವರು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಉತ್ತರಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ಅವರು ಪ್ರಧಾನಮಂತ್ರಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.