ಬೆಂಗಳೂರು: ಒಂದು ವಾರ ತಡವಾಗಿಯಾದರೂ ರಾಜ್ಯದಲ್ಲಿ ಮುಂಗಾರು ಮಳೆಯ ಭರ್ಜರಿ ಎಂಟ್ರಿಯಾಗಿದೆ. ಕೇರಳದ ಮೂಲಕ ಕರ್ನಾಟಕ ಪ್ರವೇಶಿಸಿದ ಮುಂಗಾರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಸಿಂಚನ ಮಾಡಿದೆ.
ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಸುರಿಯಲಾರಂಭಿಸಿದೆ. ಇಂದು ಬೆಳಿಗ್ಗೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೇರಿದಂತೆ ಹಲವು ಕಡೆ ಮಳೆ ಬೀಳುತ್ತಿದೆ. ಇನ್ನು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಳೆಯ ಸಿಂಚನ ಶುರುವಾಗಿದೆ. ಹೀಗಾಗಿ ರೈತರು ಮುಂಗಾರಿನ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಭೂಮಿ ಹದಗೊಳಿಸಲು ಆರಂಭಿಸಿರುವ ರೈತರು, ಬಿತ್ತನೆ ಕಾರ್ಯ ಆರಂಭಿಸಲು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗ್ರಹಕ್ಕೆ ಒತ್ತು ನೀಡಿದ್ದಾರೆ.
ಇಂದಿನಿಂದ ನಾಲ್ಕು ದಿನ ಜೋರು ಮಳೆ
ಬಂಗಾಳಕೊಲ್ಲಿ ಉಪಸಾಗರದ ಪೂರ್ವಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಜೂನ್ 14ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲೂ ಹೆಚ್ಚು ಮಳೆಯಾಗಲಿದೆ. ಜೊತೆಗೆ ಹಾವೇರಿ, ಧಾರವಾಡ, ಬೆಳಗಾವಿ, ಗುಲ್ಬರ್ಗಾ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.








