ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಸಂಭವಿಸಿದ ಭಾರೀ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಇಲ್ಲಿಯವರೆಗೂ 2 ಸಾವಿರಕ್ಕೂ ಅಧಿಕ ಜನ ಮಣ್ಣಲ್ಲಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ವಿಶ್ವಸಂಸ್ಥೆಗೆ (UN) ತಿಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವು (National Disaster Centre) ಭಾನುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಸುಮಾರು 670 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ 2 ಸಾವಿರಕ್ಕೂ ಅಧಿಕ ಜನರು ಜೀವಂತ ಸಮಾಧಿಯಾಗಿರಬಹುದು ಎಂಬ ಅಂಶ ಉಲ್ಲೇಖಿಸಲಾಗಿದೆ.
ಅಲ್ಲದೇ ಕಟ್ಟಡಗಳು, ಆಹಾರ ಬೆಳೆಗಳು ನಾಶವಾಗಿದ್ದು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಭೂಕುಸಿತಕ್ಕೆ ಮನೆಗಳು ಸುಮಾರು 26.3 ಅಡಿಗಳಷ್ಟು ಆಳಕ್ಕೆ ಹೂತುಹೋಗಿವೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕಲ್ಲುಮಣ್ಣಿನ ಅಡಿ ಸಿಲುಕಿರುವ ನೂರಾರು ಜನರ ಹುಡುಕಾಟದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ ಎನ್ನಲಾಗಿದೆ.