ಕಲಬುರಗಿ: ತಾಯಿಯೊಬ್ಬಳು ತಾನು ಹೆತ್ತ ಮಗುವನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಿವಲೀಲಾ (23), ಮಗಳಾದ ವರ್ಷಿತಾ (2) ಳನ್ನು ಕೊಲೆ ಮಾಡಿದ್ದಾಳೆ. ತಾಯಿ ಶಿವಲೀಲಾ ಚಿಂಚೋಳಿ ತಾಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು.
ಮದುವೆಯಾದ ನಂತರ ಗಂಡ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಬಂದಿದ್ದರು. ಎರಡು ದಿನಗಳ ಹಿಂದೆಯಷ್ಟೇ ಮರಳಿ ಪತಿಯ ಮನೆಗೆ ಬಂದಿದ್ದರು. ಈ ವೇಳೆ ಮಗುವನ್ನು ಕೊಲೆ ಮಾಡಿ ನೇಣಿಗೆ ಶರಣಾಗಿದ್ದಾರೆ. ಸದ್ಯ ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








