ಮದರ್‌ ಥೆರೇಸಾ ಎಂಬ ಮಾನವೀಯತೆಯ ಮಹಾಮಾತೆಗೂ ಕಲ್ಲುಹೊಡೆಯುವವರಿದ್ದರು ಎಂದರೆ..!:

1 min read
mother therasa saakshatv

ಮದರ್‌ ಥೆರೇಸಾ ಎಂಬ ಮಾನವೀಯತೆಯ ಮಹಾಮಾತೆಗೂ
ಕಲ್ಲುಹೊಡೆಯುವವರಿದ್ದರು ಎಂದರೆ..!:

mother theresa saakshatvಮಾನವೀಯತೆಯ ಮಹಾತಾಯಿ ಮದರ್ ಥೆರೆಸಾ ಪ್ರಾರಂಭದಲ್ಲಿ ಕೊಲ್ಕೊತ್ತಾ ಮುನಿಸಿಪಾಲಿಟಿ ತನಗೆ ನೀಡಿದ್ದ ಕಾಳಿ ಮಂದಿರದ ಪಕ್ಕದ ಒಂದು ನಿರುಪಯೋಗಿ ಕಟ್ಟಡದಲ್ಲಿ, ಪುಟ್ ಪಾತ್ ಗಳಲ್ಲಿ ನಿರ್ಗತಿಕರಾಗಿ ಬಿದ್ದು ಇಂದು ನಾಳೆಯೋ ತಮ್ಮ ಕೊನೇ ಗಳಿಗೆಯ ನಿರೀಕ್ಷೆಯಲ್ಲಿದ್ದ ಬಡಪಾಯಿಗಳನ್ನು ತಾನೇ ಸ್ವತಃ ಕೈಯಾರೆ ಎತ್ತಿ ತಂದು ಶುಶ್ರೂಷೆ ಮಾಡುತ್ತಿದ್ದರು.

ಇವರುಗಳ ಶರೀರ ಮಲಮೂತ್ರ, ರಕ್ತ, ಕೀವು, ವಾಂತಿಗಳಿಂದ ಮೆತ್ತಿಕೊಂಡು ಮನುಷ್ಯರು ಬಿಡಿ ನಾಯಿಗಳೂ ಹತ್ತಿರ ಬಾರದಷ್ಟು ಹೊಲಸು ನಾರುತ್ತಿದ್ದವು. ಹೀಗೆ ನಿರ್ಗತಿಕರಾಗಿ ಬೀಳುತ್ತಿದ್ದವರಲ್ಲಿ ಹೆಚ್ಚಿನವರು ಕಾಳಿ ದೇವಸ್ಥಾನದ ಬಳಿ ಕೊನೆ ಉಸಿರೆಳೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ನಂಬುತ್ತಿದ್ದ ಹಿಂದೂ ಯಾತ್ರಿಗಳು. ಆದರೆ, ಅಕ್ಕಪಕ್ಕದ ಕೆಲವು ಸಂಪ್ರದಾಯಸ್ಥ ಹಿಂದೂಗಳು ಮಾತ್ರ, ಜನರನ್ನು ಮತಾಂತರ ಮಾಡಲು ಥೆರೆಸಾ ಆ ರೀತಿ ಸೇವೆಯ ನಾಟಕವಾಡುತ್ತಿದ್ದಾಳೆ ಎಂದು ವಿಧವಿಧವಾಗಿ ಅವರನ್ನು ಅವಮಾನಿಸುತ್ತಿದ್ದರು;

ಯುವಕರು ಅವರ ತಂಡದ ಮೇಲೆ ಕಲ್ಲು ಎಸೆಯುತ್ತಿದ್ದರು. ಒಮ್ಮೆ ಅವರೆಲ್ಲ ಒಟ್ಟು ಸೇರಿ ಈ ಐರೋಪ್ಯ ಕ್ರೈಸ್ತ ಮಿಷನರಿಯನ್ನು ತಕ್ಷಣವೇ ಗಡಿಪಾರು ಮಾಡಬೇಕು ಎಂದು ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು. ಪೋಲಿಸ್ ಮುಖ್ಯಸ್ಥರು ದೂರನ್ನು ಸ್ವೀಕರಿಸಿ ತನಿಖೆ ಮಾಡಲು ಕಟ್ಟಡದೊಳಕ್ಕೆ ಹೋದರು. ಅಲ್ಲಿ ಥೆರೆಸಾ ಆಗ ತಾನೇ ರಸ್ತೆ ಬದಿಯಿಂದ ಎತ್ತಿ ತಂದ ಮೈತುಂಬ ಹುಣ್ಣುಗಳಾಗಿ ಹುಳುಗಳು ಬುಜುಗುಡುತ್ತಿದ್ದ ವ್ಯಕ್ತಿಯ ಹಾಸಿಗೆ ಬಳಿ ಮಂಡಿಯೂರಿ; ಹೆದರಬೇಡ, ವಾಸಿಯಾಗುತ್ತದೆ ಎಂದು ಸಮಾಧಾನ ಹೇಳುತ್ತ ಅವನ ಶರೀರದಿಂದ ಸೋರುತ್ತಿದ್ದ ದುರ್ನಾತದ ಕೀವನ್ನು ಒರೆಸಿ, ಕೊಳೆತ ಗಾಯಗಳನ್ನು ತೊಳೆದು, ಆಂಟಿ ಬಯೋಟಿಕ್ ಔಷಧಿ ಹಚ್ಚಿ, ಪಟ್ಟಿ ಕಟ್ಟುತ್ತಿದ್ದರು.

ಅದನ್ನು ಕಂಡ ಪೋಲಿಸ್ ಮುಖ್ಯಸ್ಥ  ದೇವರೇ, ಮನುಷ್ಯರಾದವರ್ಯಾರಾದರೂ ಈ ಕೆಲಸ ಮಾಡಲು ಸಾಧ್ಯವೇ!' ಎಂದು ಆಶ್ಚರ್ಯ ಪಡುತ್ತಿದ್ದಾಗ ಥೆರೆಸಾ 'ಬನ್ನಿ, ಇಡೀ ಕಟ್ಟಡವನ್ನು ನೋಡುವಿರಂತೆ' ಎಂದರು. ಅದಕ್ಕೆ ಪೋಲಿಸ್ ಮುಖ್ಯಸ್ಥ 'ಬೇಡ ತಾಯೀ, ಇಷ್ಟು ನೋಡಿದ್ದು ಸಾಕು' ಎಂದು ಹೇಳಿ ಹೊರ ಬಂದರು.

mother therasa saakshatvಹೊರಗಡೆ ದೂರು ನೀಡಿದ್ದ ಗುಂಪು ಅವರಿಗಾಗಿ ಕಾಯುತ್ತಿತ್ತು. ಪೋಲಿಸ್ ಮುಖ್ಯಸ್ಥ ;ಆಯಿತು ನೀವು ಹೇಳಿದಂತೆ ಆ ವಿದೇಶಿ ಮಹಿಳೆಯನ್ನು ಗಡಿಪಾರು ಮಾಡುತ್ತೇವೆ. ಆದರೆ, ಯಾವಾಗ ಗೊತ್ತೇ? ಯಾವತ್ತು ನಿಮ್ಮ ತಾಯಿ ಅಥವಾ ಅಕ್ಕತಂಗಿಯರು ಇಲ್ಲಿಗೆ ಬಂದು ಆಕೆ ಏನು ಕೆಲಸ ಮಾಡುತ್ತಿದ್ದಾರೋ ಆ ಕೆಲಸವನ್ನು ಮಾಡುತ್ತಾರೋ ಆವತ್ತುಎಂದು ಹೇಳಿದಾಗ ದೂರು ಕೊಟ್ಟ ಗುಂಪು ಬಾಯಿ ಮುಚ್ಚಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿತು.

ಅಷ್ಟಾದ ನಂತರವೂ ಮದರ್ ಥೆರೆಸಾರಿಗೆ ಅವರ ಕಾಟ ತಪ್ಪಲಿಲ್ಲ. ಒಂದು ದಿನ ಅದೇ ಕಾಳಿ ಮಂದಿರದ ಬಳಿ ದೊಡ್ಡದೊಂದು ಜನರ ಗುಂಪು ಸೇರಿತ್ತು. ಥೆರೆಸಾ ಹೋಗಿ ನೋಡಿದಾಗ ಕಾಳಿ ಮಂದಿರದ ವಯಸ್ಸಾದ ಅರ್ಚಕ ಕಾಲರಾ ಪೀಡಿತನಾಗಿ ನೆಲದ ಮೇಲೆ ಬಿದ್ದಿದ್ದ. ದೇಹದ ಮೇಲೆ ಜನಿವಾರ ಇತ್ತು. ಕಣ್ಣುಗಳು ನಿಸ್ತೇಜವಾಗಿದ್ದವು. ಮುಖ ರಕ್ತದ ಛಾಯೆಯೂ ಇಲ್ಲದೆ ಬಿಳಿಚಿಕೊಂಡಿತ್ತು. ಆತನ ಸಾವು ನಿಶ್ಚಯವಾಗಿತ್ತು. ಆಗ ಬಂಗಾಳದಲ್ಲಿ ಕಾಲರಾ ಮಾರಿಯಂತೆ ಬಂಗಾಳಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಕಾಲವಾದುದರಿಂದ ಅಲ್ಲಿ ನೆರೆದ ಯಾರಿಗೂ ಅವನನ್ನು ಮುಟ್ಟುವ ಧೈರ್ಯವೂ ಇರಲಿಲ್ಲ. ಥೆರೆಸಾ ಗುಂಪನ್ನು ಸೀಳಿಕೊಂಡು ಮುಂದೆ ಬಂದು ತನ್ನ ಕೈಯಾರೆ ಅವನನ್ನು ಎತ್ತಿ ತಂದು ದಿನರಾತ್ರಿ ಎನ್ನದೆ ಆರೈಕೆ ಮಾಡಿದ ಫಲವಾಗಿ ಅವನು ಬದುಕಿಕೊಂಡನು. ಸಂಪೂರ್ಣವಾಗಿ ಗುಣವಾದ ನಂತರ ಅವನು ಹೇಳಿದ ಮಾತು ಮಾರ್ಮಿಕವಾಗಿತ್ತು-

ಮೂವತ್ತು ವರ್ಷಗಳ ಕಾಲ ನಾನು ಒಂದು ಕಲ್ಲು ಕಾಳಿಯನ್ನು ಪೂಜಿಸಿದೆ. ಆದರೆ, ಈವತ್ತು ಮಾಂಸ ರಕ್ತದ ನಿಜವಾದ ಕಾಳಿಯನ್ನು ಕಂಡೆ ತಾಯೀ;. ಅಂದಿನಿಂದ ಮದರ್ ಥೆರೆಸಾರತ್ತ ಜನ ಕಲ್ಲು ಎಸೆಯುವುದು ನಿಂತಿತು! ಆದರೆ, ಇಂದು ಬೇರೆಯೇ ರೀತಿಯ ಕಲ್ಲು ಎಸೆಯುವವರ ಸಂತಾನ ಹುಟ್ಟಿಕೊಂಡವೆ

-ಪಂಜು ಗಂಗೊಳ್ಳಿ, ಪತ್ರಕರ್ತ, ಹವ್ಯಾಸಿ ಬರಹಗಾರ ಕಾರ್ಟೂನಿಸ್ಟ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd