ತಂದೆ ತಾಯಿ ಮಕ್ಕಳಿಗೆ ಬಾಲ್ಯದಿಂದಲೇ ಸನ್ನಡತೆ, ಒಳ್ಳೆಯ ಗುಣಗಳನ್ನು ಬೆಳೆಸುವ ಪಾಠ ಮಾಡಿ ಮಕ್ಕಳಿಗೆ ಒಳ್ಳೆ ದಾರಿಯಲ್ಲಿ ನಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗುವುದನ್ನು ಹೇಳಿಕೊಡಬೇಕು. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ತೋರಿಸಿ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಕಲಿಸಬೇಕು. ಆದರೆ ಇಲ್ಲೊಬ್ಬ ತಾಯಿ ಸ್ವತಃ ಕಳ್ಳಿಯಾಗಿದ್ದು, ಪುತ್ರನಿಗೂ ಅದೇ ದಾರಿಯಲ್ಲೇ ಬದುಕುವುದನ್ನು ಹೇಳಿಕೊಟ್ಟಿದ್ದಾಳೆ. ಇನ್ನೂ ಮೊಮ್ಮಗನಿಗೆ ಸ್ವತಃ ಅಜ್ಜಿಯೇ ರಕ್ಷಕಿಯಾಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ದೆಹಲಿಯ ಅಂಬೇಡ್ಕರ್ನಗರದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಇರಿಸಲಾಗಿದ್ದ 1.2 ಲಕ್ಷ ರೂ. ನಗದು ಇದ್ದ ಬ್ಯಾಗ್ ಅನ್ನು ಜು.27ರಂದು 12 ವರ್ಷದ ಬಾಲಕನೊಬ್ಬ ಕದ್ದು ಪರಾರಿಯಾಗಿದ್ದ. ಹಣ ಕಳೆದುಕೊಂಡಿದ್ದವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಕಾರು ನಿಲ್ಲಿಸಿದ್ದ ಆಸುಪಾಸಿನಲ್ಲಿದ್ದ ಸಿಸಿ ಕ್ಯಮೆರಾದಲ್ಲಿ ಕಳ್ಳತನದ ದೃಷ್ಯ ಸೆರೆಯಾಗಿತ್ತು. ಸಿಸಿ ಕ್ಯಾಮೆರಾ ದೃಷ್ಯ ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಕಳ್ಳತನ ಮಾಡಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಆತನ ಬಳಿ 5 ಸಾವಿರ ರೂಪಾಯಿ ಹಣ ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ. ಬಳಿಕ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ ನಂತರ ಆತನ ತಾಯಿ ಹಾಗೂ ಅಜ್ಜಿಯ ಬಗ್ಗೆ ಬಾಲಕ ಬಾಯಿ ಬಿಟ್ಟಿದ್ದಾನೆ. ಬಾಲಕನ ಮಾಹಿತಿ ಪ್ರಕಾರ ಆತನ ತಾಯಿಯೇ ಕಳ್ಳತನ ಮಾಡುವುದನ್ನು ಹೇಳಿಕೊಟ್ಟಿದ್ದ ಬಗ್ಗೆ ತಿಳಿದು ಬಂದಿದೆ. ತಾಯಿ-ಮಗ ಕದ್ದು ತರುತ್ತಿದ್ದ ನಗದು, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಅಜ್ಜಿ ಬಚ್ಚಿಟ್ಟು, ಕಾವಲು ಕಾಯುತ್ತಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಬಾಲಕನ ಸಿಕ್ಕಿಹಾಕಿಕೊಂಡಿರುವ ಬಗ್ಗೆ ತಿಳಿಯುತ್ತಿದ್ದಂತೆ ಆತನ ತಾಯಿ ತಲೆಮರೆಸಿಕೊಂಡಿದ್ದು, ಅಜ್ಜಿಯನ್ನೂ ಸಹ ಪೊಲೀಸರುವ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪರಾರಿಯಾಗಿರುವ ಕಳ್ಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.