ಧೋನಿಯನ್ನು ದೂಷಣೆ ಮಾಡಲ್ಲ.. ಆತ ಸ್ಪಷ್ಟ ಚಿತ್ರಣ ನೀಡಿದ್ದ – ಯುವರಾಜ್ ಸಿಂಗ್
2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗತ್ತೋ ಇಲ್ವೋ ಎಂಬುದರ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನನಗೆ ಸ್ಪಷ್ಟತೆ ನೀಡಿದ್ದರು ಎಂದು ಯುವರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಯುವರಾಜ್ ಸಿಂಗ್ 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಪರ ತನ್ನ ಕೊನೆಯ ಪಂದ್ಯವನ್ನಾಡಿದ್ದರು. ಇದಕ್ಕು ಮೊದಲು ಇಂಗ್ಲೆಂಡ್ ವಿರುದ್ಧ ಯುವಿ ಕಮ್ ಬ್ಯಾಕ್ ಮಾಡಿದ್ದರು. ಈ ಸರಣಿಯ ಕಟಕ್ ಪಂದ್ಯದಲ್ಲಿ 150 ರನ್ ಸಹ ದಾಖಲಿಸಿದ್ದರು. ಬಳಿಕ ಯುವಿ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ 53 ರನ್ ಸಿಡಿಸಿದ್ದರು. 2019ರ ವಿಶ್ವಕಪ್ ವೇಳೆ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.
ನಾನು ತಂಡಕ್ಕೆ ಕಮ್ ಬ್ಯಾಕ್ ಮಾಡುವಾಗ ವಿರಾಟ್ ಕೊಹ್ಲಿ ನನಗೆ ಬೆಂಬಲ ನೀಡಿದ್ದರು. ಆದ್ರೆ ಅವನು ಬೆಂಬಲ ನೀಡದೇ ಇರುತ್ತಿದ್ರೆ ನಾನು ತಂಡಕ್ಕೆ ಕಮ್ ಬ್ಯಾಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಧೋನಿ ನನಗೆ ಸ್ಪಷ್ಟತೆ ನೀಡಿದ್ದರು. 2019ರ ವಿಶ್ವಕಪ್ ನಲ್ಲಿ ಆಯ್ಕೆಗಾರರು ತನ್ನ ಬಗ್ಗೆ ಒಲವು ತೋರುತ್ತಿಲ್ಲ. ಹಾಗಂತ ಧೋನಿ ನಿಖರವಾಗಿ ಹೇಳಿದ್ದರು. ಸ್ಪಷ್ಟವಾದ ಚಿತ್ರಣವನ್ನೂ ನೀಡಿದ್ದರು. ಇದಕ್ಕಿಂತ ಜಾಸ್ತಿ ಧೋನಿಗೆ ಏನು ಮಾಡಲು ಸಾಧ್ಯವಿರಲಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
2011ರ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಆದ್ರೆ 2019ರ ವಿಶ್ವಕಪ್ ನಲ್ಲಿ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. 2015ರಲ್ಲಿ ಯುವರಾಜ್ ಸಿಂಗ್ ಕೆಟ್ಟ ಫಾರ್ಮ್‍ನಿಂದ ಪರದಾಡುತ್ತಿದ್ದರು. ಹಾಗೇ ಟೀಮ್ ಇಂಡಿಯಾದಿಂದ ಹೊರನಡೆದಿದ್ದರು. ಬಳಿಕ ರಣಜಿ ಟೂರ್ನಿಯಲ್ಲಿ ಸತತ ಮೂರು ಶತಕ ದಾಖಲಿಸಿದ್ದರು. ಆದ್ರೆ ಬಿಸಿಸಿಐ ಅವಕಾಶ ನೀಡಲಿಲ್ಲ. ಈ ಬಗ್ಗೆ ಯುವರಾಜ್ ಸಿಂಗ್ ಧೋನಿಯವರನ್ನು ದೂಷಣೆ ಮಾಡುವುದಿಲ್ಲ.
ನಾನು ಧೋನಿಯನ್ನು ದೂಷಣೆ ಮಾಡುವುದಿಲ್ಲ. 2011ರ ವಿಶ್ವಕಪ್ ಬಳಿಕ ನನ್ನ ಬಗ್ಗೆ ಧೋನಿ ಅಪಾರವಾದ ವಿಶ್ವಾಸವನ್ನಿಟ್ಟುಕೊಂಡಿದ್ದ. ನೀನು ನನ್ನ ಪ್ರಮುಖ ಆಟಗಾರ ಎಂದು ಹೇಳುತ್ತಿದ್ದ. ನನ್ನ ಆರೋಗ್ಯದಿಂದ ಚೇತರಿಸಿಕೊಂಡ ನಂತರ ಆಟದಲ್ಲಿ ಸಾಕಷ್ಟು ಬದಲಾವಣೆಗಳಾದವು. ತಂಡದಲ್ಲೂ ಸಾಕಷ್ಟು ಬದಲಾವಣೆಗಳಾದವು. 2015ರ ವಿಶ್ವಕಪ್ ಸಂದರ್ಭದಲ್ಲಿ ಯಾವುದನ್ನು ಬೊಟ್ಟು ಮಾಡಿಕೊಂಡು ಹೇಳಲು ಸಾಧ್ಯವಿಲ್ಲ. ಅದು ವೈಯಕ್ತಿಕ ವಿಚಾರ ಅಷ್ಟೇ. ನನಗೂ ಗೊತ್ತು.. ನಾಯಕ ಕೆಲವೊಂದು ಬಾರಿ ಎಲ್ಲವನ್ನೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಅಂತ. ಕೊನೆಗೆ ತಂಡ ಮತ್ತು ದೇಶ ಮುಖ್ಯ ಎಂಬುದು ಚೆನ್ನಾಗಿ
ತಿಳಿದುಕೊಂಡಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಈ ಹಿಂದೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಅವರು ಧೋನಿಯ ವಿರುದ್ಧ ಕಿಡಿ ಕಾರುತ್ತಿದ್ದರು. ತನ್ನ ಮಗನ ಕ್ರಿಕೆಟ್ ಭವಿಷ್ಯಕ್ಕೆ ಅಡ್ಡಿಯನ್ನುಂಟು ಮಾಡಿರೋದು ಧೋನಿಯೇ ಎಂದು ಆರೋಪ ಮಾಡಿದ್ದರು. ಆದ್ರೆ ಯುವಿಯ ಈ ಹೇಳಿಕೆಯನ್ನು ನೋಡಿದಾಗ ಧೋನಿ ಮತ್ತು ಯುವರಾಜ್ ಸಿಂಗ್ ಸ್ನೇಹಿತರಾಗಿದ್ದರು ಎಂಬುದು ಗೊತ್ತಾಗುತ್ತೆ.