ಹೊಸಕೋಟೆ : ಹೊಸಕೋಟೆ ಮಿನಿ ಸಮರದಲ್ಲಿ ಸೋತು ಸೈಲೆಂಟ್ ಆಗಿದ್ದ ಎಂಟಿಬಿ ನಾಗರಾಜ್, ಎಂಎಲ್ ಸಿ ಆಗುತ್ತಿದ್ದಂತೆ ಮೈ ಕೊಡವಿಕೊಂಡು ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸಮರ ಸಾರಿದ್ದಾರೆ. ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿ ಓಡಾಡಿಕೊಂಡು ಶಾಸಕ ಶರತ್ ಬಚ್ಚೇಗೌಡ ವಿರುದ್ಧ ವಾಗ್ಬಾಣಗಳನ್ನು ಬಿಡುತ್ತಿರುವ ನಾಗರಾಜ್ ಇಂದು, “ಭೂಅಸ್ತ್ರ” ಪ್ರಯೋಗಿಸಿದ್ದಾರೆ.
ಇತ್ತೀಚೆಗಷ್ಟೆ ಕೊರಳೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಎಂಟಿಬಿ ನಾಗರಾಜ್ ಚಾಲನೆ ನೀಡಿದ್ದರು. ಈ ಬಗ್ಗೆ ಮಾತನಾಡಿದ್ದ ಶಾಸಕ ಶರತ್ ಬಚ್ಚೇಗೌಡ, ‘ಸೋತಾಗಿನಿಂದ ಗಡಾರಿಯನ್ನು ಕಾರಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದರು ಎಂದು ಕೇಳಿದ್ದೆ. ಅದು ತುಕ್ಕು ಹಿಡಿದಿರಬೇಕು, ಅದನ್ನು ಹೋಗಿಸಲು ಹೀಗೆ ಮಾಡಿದ್ದಾರೆ’ ಎಂದು ಹೇಳಿಕೆ ಕೊಟ್ಟಿದ್ದರು.
ಈ ಹೇಳಿಕೆಗೆ ಇಂದು ತಿರುಗೇಟು ಕೊಟ್ಟಿರೋ ಎಂಟಿಬಿ,’ ಬಚ್ಚೇಗೌಡ ಕುಟುಂಬದವರು ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಬರುತ್ತಿದ್ದಾರೆ. ಶಾಂತನಪುರದಲ್ಲಿ ಸರ್ಕಾರಿ ಜಾಗ ಮತ್ತು ಸ್ಮಶಾನ ಜಾಗವನ್ನು ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬ ಅಕ್ರಮವಾಗಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಈ ಬಗ್ಗೆ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬರುತ್ತೇನೆ. ಅವರಿಗೆ ತಾಕತ್ತು ಇದ್ದರೆ ನನ್ನ ಮುಂದೆ ಬರಲಿ ಎಂದು ಶಾಸಕರಿಗೆ ಬಹಿರಂಗವಾಗಿಯೇ ಸವಾಲು ಎಸೆದಿದ್ದಾರೆ. ಅವರ ಭೂ ಅಕ್ರಮವನ್ನು ಸಾಬೀತು ಮಾಡುತ್ತೇನೆ. ಶರತ್ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದ್ದಾರೆ.