ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಮುಡಾ ಸಂಕಷ್ಟ ಸುತ್ತಿಕೊಂಡಿದೆ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ರಾಜ್ಯಪಾಲರು ವರ್ಸಸ್ ಸರ್ಕಾರ ಎನ್ನುವಂತಾಗಿ ಬಿಟ್ಟಿದೆ. ಸದ್ಯ ಪ್ರಕರಣದಲ್ಲಿ ಮತ್ತೊಂದು ವಿಷಯ ಬಹಿರಂಗವಾಗಿದ್ದು, ಪತ್ನಿ ಪಾರ್ವತಿಯವರಿಗೆ ಕಳೆದುಕೊಂಡ ಜಮೀನಿಗೆ ಮಾರುಕಟ್ಟೆ ದರ ನೀಡಲು ಮುಡಾ (MUDA) ಮುಂದಾಗಿತ್ತು. ಆದರೆ, ಈ ಪ್ರಸ್ತಾಪವನ್ನು ಪಾರ್ವತಿ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದರು ಎಂದು ತಿಳಿದು ಬಂದಿದೆ.
ಈ ಆರೋಪವನ್ನು ಸಾಮಾಜಿಕ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. 2014ರಲ್ಲಿ ಸಿಎಂ ಪತ್ನಿ ಪಾರ್ವತಿಯವರು ಮುಡಾಗೆ ಮನವಿ ಪತ್ರ ಬರೆದಿದ್ದರು. ನನ್ನ ಜಮೀನಿನಲ್ಲಿ ಮುಡಾ ನಿವೇಶನ ಮಾಡಿ ಹಂಚಿದೆ. ಹೀಗಾಗಿ ಪರಿಹಾರ ನೀಡುವಂತೆ ಪಾರ್ವತಿಯವರು ಮನವಿ ಮಾಡಿದ್ದಾರೆ.
ಸಿಎಂ ಪತ್ನಿಯವರ ಮನವಿಗೆ ಮುಡಾ ಮಾರುಕಟ್ಟೆ ದರ ಅಥವಾ 60:40 ಅನುಪಾತದಲ್ಲಿ ಪರಿಹಾರ ನೀಡಲು ನಿರ್ಧರಿಸಿತ್ತು. ಇದಕ್ಕೆ ಪಾರ್ವತಿ ಅವರು ಬದಲಿ ಜಮೀನಿನನ್ನೇ ಕೊಡಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಸಭೆಯ ನಡಾವಳಿಯಲ್ಲಿ ಮುಡಾದ ಅಂದಿನ ಅಧ್ಯಕ್ಷ ಡಿ.ಧೃವಕುಮಾರ್ ನಮೂದಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಅವರ ಆಪ್ತ ಧೃವಕುಮಾರ್ ಮುಡಾ ಅಧ್ಯಕ್ಷರಾಗಿದ್ದರು. ಸಿದ್ದರಾಮಯ್ಯ ಅವರು ಮುಡಾಗೆ ಪತ್ರ ಬರೆದಿಲ್ಲ ಎಂದು ಹೇಳಿದ್ದರು. ಆದರೆ, ಪತ್ರ ಬರೆದಿದ್ದಾರೆ ಎಂದು ಸ್ನೇಹಮಯಿ ದಾಖಲೆ ಬಿಡುಗಡೆ ಮಾಡಿ ಆರೋಪಿಸಿದ್ದಾರೆ.
ಪಾರ್ವತಿ ಅವರು ಮಾರುಕಟ್ಟೆ ದರ ಅಥವಾ 60:40 ಅನುಪಾತದಲ್ಲಿ ಪರಿಹಾರ ಬೇಡ ಎಂದು ಹೇಳಿ ಬದಲಿ ಜಮೀನು ನೀಡಬೇಕೆಂದು ಬರೆದ ಪತ್ರವನ್ನು ಈಗ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.







