Mukhtar Abbas Naqvi – ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜಿನಾಮೆ….
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ನಖ್ವಿ ಅವರ ರಾಜ್ಯಸಭೆಯ ಅವಧಿ ನಾಳೆ ಅಂದರೆ ಗುರುವಾರ ಕೊನೆಗೊಳ್ಳಲಿರುವ ಹಿನ್ನಲೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಬಿಜೆಪಿ ನಾಮನಿರ್ದೇಶನ ಮಾಡಲಿಲ್ಲ, ಮೂಲಗಳ ಪ್ರಕಾರ ಬಿಜೆಪಿ ಅವರಿಗೆ ದೊಡ್ಡ ಹುದ್ದೆಯನ್ನ ಕಾಯ್ದಿರಿಸಿದೆ ಎನ್ನಲಾಗಿದೆ. ಎನ್ಡಿಎ ಕಡೆಯಿಂದ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ನಖ್ವಿ ಅವರು ಇಲ್ಲಿಯವರೆಗೆ ಕೇಂದ್ರ ಸರ್ಕಾರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರನ್ನು ಶ್ಲಾಘಿಸಿದ್ದಾರೆ. ದೇಶದ ಅಭಿವೃದ್ಧಿಗೆ ನೀವು ಕೊಡುಗೆ ನೀಡಿದ್ದೀರಿ ಎಂದು ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮುಖ್ತಾರ್ ಅಬ್ಬಾಸ್ ನಖ್ವಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ಆದರೆ, ಉಭಯ ನಾಯಕರ ನಡುವೆ ನಡೆದ ಮಾತುಕತೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಮುಖ್ತಾರ್ ಅಬ್ಬಾಸ್ ನಖ್ವಿ ಜತೆಗೆ ಜನತಾ ದಳ ಯುನೈಟೆಡ್ ಕೋಟಾದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಆರ್ ಸಿಪಿ ಸಿಂಗ್ ಕೂಡ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಆರ್ಸಿಪಿ ಸಿಂಗ್ ಅವರನ್ನ ಈ ಬಾರಿ ಅವರ ಪಕ್ಷದಿಂದ ರಾಜ್ಯಸಭೆಗೆ ಕಳುಹಿಸಲಾಗಿಲ್ಲ, ಅವರ ಅವಧಿ ಜುಲೈ 7 ಕ್ಕೆ ಕೊನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಅವರು ಸಹ ರಾಜಿನಾಮೆ ನೀಡಿದ್ದಾರೆ.