ಬಳ್ಳಾರಿ: ಬಳ್ಳಾರಿ ಜೈಲು ಪಾಲಾಗಿರುವ ನಟ ದರ್ಶನ್ (Darshan) ಟಿವಿಗಾಗಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿಯವರೆಗೆ ಟಿವಿ ಸಹವಾಸ ಬೇಡ ಎನ್ನುತ್ತಿದ್ದ ನಟ ದರ್ಶನ್ ಈಗ ಟಿವಿ ಬೇಕೆಂದು ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಪೊಲೀಸರು ದರ್ಶನ್ ಪರ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ದರ್ಶನ್ ರನ್ನು ಇರಿಸಿರುವ ಹೈ ಸೆಕ್ಯೂರಿಟಿ ಸೆಲ್ ಬಳಿ ಸಿಬ್ಬಂದಿ ತಿಂಡಿ ಕೊಡಲು ಹೋಗಿದ್ದಾಗ ಚಾರ್ಜ್ಶೀಟ್ ಸಲ್ಲಿಕೆ ವಿಚಾರದ ಕುರಿತು ದರ್ಶನ್ ಪದೇ ಪದೇ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಸಿಗದಿದ್ದಾಗ ಜೈಲು ಸಿಬ್ಬಂದಿ ಬಳಿ ಮಧ್ಯಾಹ್ನದ ಊಟ ಕೊಡಲು ಹೋದಾಗ ಟಿವಿ ಬಗ್ಗೆ ವಿಚಾರಿಸಿದ್ದಾರೆ. ಆಗ ಟಿವಿ ಬೇಕು ಅನ್ನುವುದಾದರೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ದರ್ಶನ್ ಟಿವಿ ಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೈಲಿನ ಮ್ಯಾನುವಲ್ ಪ್ರಕಾರ ಕೈದಿಗಳಿಗೆ ಟಿವಿ ಕೊಡುವುದಕ್ಕೆ ಅವಕಾಶ ಇದೆ. ಸದ್ಯ ದರ್ಶನ್ ಸೆಲ್ ನಲ್ಲಿ ಟಿವಿ ಇಲ್ಲ. ಈಗ ದರ್ಶನ್ ಸೆಲ್ ಗೆ ಟಿವಿ ನೀಡುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.