ಬೆಂಗಳೂರು : ಮುತ್ತಪ್ಪ ರೈ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ವಿಷಮಗೊಂಡಿತ್ತು. ಸಾವು ನೋವಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮುತ್ತಪ್ಪ ರೈ ಅವರು ಒಂದು ಕಾಲದಲ್ಲಿ ಭೂಗತ ಲೋಕವನ್ನು ಆಳಿದರಾದರೂ ಹಲವು ವರ್ಷಗಳಿಂದ ಡಾನ್ ಗಾರಿಕೆ ತ್ಯಜಿಸಿ ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
2013ರಲ್ಲಿ ಇವರ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. 2018ರಲ್ಲಿ ಇವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. “ದೇಹಕ್ಕೆ ಐದು ಬುಲೆಟ್ ಬಿದ್ದರೂ ಹೆದರಿರಲಿಲ್ಲ. ಈಗ ಈ ಕ್ಯಾನ್ಸರ್ ಗೆ ಹೆದರುತ್ತೇನೆಯೇ” ಎಂದು ಇತ್ತೀಚೆಗೆ ಅವರು ಹೇಳಿದ್ದರು. ಅಂತೆಯೇ, ಅವರು ತಮ್ಮ ಕೊನೆಯ ಉಸಿರುವವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿಯೇ ತೀರುತ್ತೇನೆ ಎಂದಿದ್ದರು. ಈಗಲೂ ಅದೇ ಹೋರಾಟದಲ್ಲಿದ್ದಾರೆ.