ಅಕ್ಷರಸಃ ನರಕವಾದ ಮ್ಯಾನ್ಮಾರ್, ಅಸಹಾಯಕತೆಯಿಂದ ಭಾರತಕ್ಕೆ ಓಡಿ ಬಂದ ಮ್ಯಾನ್ಮಾರ್ ಪೊಲೀಸರು..!
ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ಸೇನಾ ಅಧಿಪತ್ಯ ಸಾಧಿಸಿದ ನಂತರ ಪ್ರಜಾಪ್ರಭುತ್ವ ಮರುಸ್ಫಾಪನೆಗಾಗಿ ಜನರು ಸೇನಾ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ರಸ್ತೆಗಿಳಿದು ಪ್ರತಿಭಟನೆಗಳನ್ನ ನಡೆಸುತ್ತಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಭದ್ರತಾ ಪಡೆ ಇತ್ತೀಚೆಗೆ ಮತ್ತೆ ಪ್ರತಿಭಟನಾನಿರತ 38 ಜನರನ್ನ ಹತ್ಯೆಗೈದಿದೆ ಎಂದು ವಿಶ್ವಸಂಸ್ಥೆಯೇ ತಿಳಿಸಿದೆ.
ಇದೇ ಬೆಳವಣಿಗೆಯಲ್ಲೇ ಮ್ಯಾನ್ಮಾರ್ ನ ಸುಮಾರು 19 ಪೊಲೀಸರು, ತಮ್ಮ ದೇಶದ ಗಡಿ ದಾಟಿ ಭಾರತಕ್ಕೆ ಆಗಮಿಸಿದ್ದಾರೆ. ಹೌದು ಮ್ಯಾನ್ಮಾರ್ನೊಂದಿಗೆ ಅಷ್ಟು ಬಿಗಿಯಾದ ಗಡಿ ಬೇಲಿ ಹೊಂದಿರದ ಮಿಜೋರಾಂ ರಾಜ್ಯದ ಚಂಪಾಯ್ ಹಾಗೂ ಸೆರ್ಚಿಪ್ ಎಂಬ ಪ್ರಾಂತ್ಯಗಳಿಂದ ಭಾರತದೊಳಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲಿ ನಡೆಯುತ್ತಿರುವ ದಂಗೆಗಳನ್ನು ನಿರ್ದಯವಾಗಿ ಹತ್ತಿಕ್ಕುವಂತೆ ಮ್ಯಾನ್ಮಾರ್ ಸೇನೆ ತಮಗೆ ನೀಡಿರುವ ಆದೇಶವನ್ನು ಪಾಲಿಸಲಾಗದ ಅಸಹಾಯಕತೆಯಿಂದಾಗಿ ಅವರು ಭಾರತಕ್ಕೆ ಓಡಿಬಂದಿರೋದಾಗಿ ತಿಳಿದುಬಂದಿದೆ.
ಪೂರ್ವ ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ : 11 ಸೇನಾ ಸಿಬ್ಬಂದಿ ಸಾವು
ಫೆಬ್ರವರಿ 1ರಂದು ಮ್ಯಾನ್ಮಾರ್ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿತ್ತು. ಬಳಿಕ ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು. ಸೇನಾ ಕ್ಷಿಪ್ರಕ್ರಾಂತಿ ನಡೆದ ಬಳಿಕ ದೇಶದಲ್ಲಿ ಈವರೆಗೆ 50ಕ್ಕೂ ಅಧಿಕ ಮಂದಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ದೇಶದ ಅತಿದೊಡ್ಡ ನಗರವಾದ ಯಂಗೋನ್ ನ ಮೂರು ಕಡೆ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು, ಭದ್ರತಾ ಪಡೆಗಳ ಯತ್ನ ವಿಫಲವಾಗಿದ್ದು, ನಾಗರಿಕರು ಪೊಲೀಸರ ಗುಂಡಿಗೂ ಜಗ್ಗದೇ ಪ್ರತಿಭಟನೆ ಮುಂದುವರಿಸಿದ್ದಾರೆ.
ಮ್ಯಾಂಡಲೇ ನಗರದಲ್ಲಿಯೂ ಪ್ರತಿಭಟನೆ ತೀವ್ರಗೊಂಡಿದೆ.
ಇನ್ನೂ ಪ್ರತಿಭಟನೆ ಹತ್ತಿಕ್ಕುವ ಕಾರ್ಯತಂತ್ರದ ಭಾಗವಾಗಿ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಇಂಟರ್ ನೆಟ್ ಸೇವೆಯನ್ನು ಮ್ಯಾನ್ಮಾರ್ ನಲ್ಲಿ ಸ್ಥಗಿತಗೊಳಿಸಲಾಗಿದೆ. ಒಟ್ಟಾರೆ ಮ್ಯಾನ್ಮಾರ್ ಅಕ್ಷರಶಃ ನರಕವಾಗಿ ಮಾರ್ಪಾಡಾಗಿದೆ. ಇತ್ತ ಮ್ಯಾನ್ಮಾರ್ ನಲ್ಲಿ ಸೇನಾ ಅಧಿಕಾರವನ್ನು ಅಂತ್ಯಗೊಳಿಸಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಅವರು ಒತ್ತಾಯಿಸಿದ್ದಾರೆ.