ಮೈಸೂರು, ಮೇ 23 : ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೈಸೂರು-ಬೆಂಗಳೂರು ರೈಲು ಸಂಚಾರ ಪುನಾರಾರಂಭವಾಗಿದ್ದು, ಮೊದಲ ದಿನ 57 ಮಂದಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಮತ್ತು ಬೆಂಗಳೂರಿನಿಂದ ಮೈಸೂರಿಗೆ 63 ಮಂದಿ ತೆರಳಿದ್ದಾರೆ. ಭಾನುವಾರ ಹೊರತುಪಡಿಸಿ ಪ್ರತಿದಿನ ಸಂಚರಿಸಲಿದ್ದು, ರೈಲು ನಿಲ್ದಾಣದ 1 ದ್ವಾರದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಲು ಸೂಚಿಸಲಾಗಿದ್ದು, ಮೈಸೂರು, ನಾಗನಹಳ್ಳಿ,ಪಾಂಡವಪುರ, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ ಮತ್ತು ಬೆಂಗಳೂರಿನಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ರೈಲ್ವೆ ನಿಲ್ದಾಣದ ಹಿಂದಿನ ಪ್ರವೇಶದ್ವಾರ, ಸಬ್ ವೇ ಬಂದ್ ಮಾಡಲಾಗಿದ್ದು, ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿದ ಬಳಿಕ ರೈಲು ನಿಲ್ದಾಣ ಪ್ರವೇಶಿಸಲು ಅನುಮತಿ ಕೊಡಲಾಗುತ್ತಿದೆ. ಜೂನ್ 1ರಿಂದ ದೇಶದಾದ್ಯಂತ ಸುಮಾರು 100 ರೈಲುಗಳು ಸಂಚಾರ ಪ್ರಾರಂಭಿಸಲಿದ್ದು, ಮೈಸೂರು ವಿಭಾಗದಲ್ಲಿ ಮೈಸೂರು, ಹಾಸನ, ಶಿವಮೊಗ್ಗದಿಂದ ರೈಲು ಟಿಕೆಟ್ ಬುಕ್ಕಿಂಗ್ ಸ್ವೀಕರಿಸಲಾಗುತ್ತದೆ. ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭಿಸಿದ್ದು, ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣ, ದಾವಣಗೆರೆ, ಶಿವಮೊಗ್ಗ ಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಕೌಂಟರ್ ತೆರೆಯಲಾಗಿದೆ. ಪ್ರತಿದಿನ ಬೆಳಗ್ಗೆ 8ರಿಂದ ಬುಕಿಂಗ್ ಸ್ವೀಕರಿಸಲಾಗುತ್ತದೆ. ಬುಕ್ಕಿಂಗ್ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕ ಬಾಕ್ಸ್ ನಿರ್ಮಿಸಲಾಗಿದೆ ಅಲ್ಲದೆ ಸ್ಯಾನಿಟೈಸರ್ ನೀಡಲು ತೀರ್ಮಾನಿಸಲಾಗಿದೆ ಎಂದು ಮೈಸೂರು ವಿಭಾಗೀಯ ಕಚೇರಿ ತಿಳಿಸಿದೆ.








