Mysuru | ಮೈದುಂಬಿ ಹರಿಯುತ್ತಿದೆ ಕಪಿಲ ನದಿ.. ಜಲ ದಿಗ್ಬಂಧನದಲ್ಲಿ ಪರಶುರಾಮ
ಮೈಸೂರು : ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾಗಿದ್ದು, ಕಪಿಲ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಹೀಗಾಗಿ ದಕ್ಷಿಣಕಾಶಿ ನಂಜನಗೂಡಿನಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.
ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಸಮೀಪದಲ್ಲಿರುವ ಪರಶುರಾಮ ದೇವಾಲಯ ಸುತ್ತ ನೀರು ಆವರಿಸಿದ್ದು, ಪರಶುರಾಮ ಜಲ ದಿಗ್ಭಂಧನದಲ್ಲಿದ್ದಾನೆ.
ಕಪಿಲಾ ನದಿಯ ದಡದ ಸ್ನಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪ ಸ್ವಾಮಿ ದೇವಾಲಯದ ಹಂತಗಳು ಮುಳುಗಡೆಯಾಗಿವೆ.
ನಂಜನಗೂಡು ಪಟ್ಟಣದ ಹಳ್ಳದ ಕೇರಿ ಬಡಾವಣೆಯ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದೆ.

ಹೀಗಾಗಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ.
ಇತ್ತ ಕಪಿಲಾ ನದಿಯ ಅಂಚಿಗೆ ಸಾರ್ವಜನಿಕರು ಮತ್ತು ಭಕ್ತರು ತೆರಳದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಕಪಿಲಾ ನದಿ ಮತ್ತು ಪರಶುರಾಮ ದೇವಾಲಯದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಅಲ್ಲದೆ ಕಪಿಲ ನದಿಯ ಸುತ್ತಮುತ್ತಲಿನ ಅಂಗಡಿ ಮಳಿಗೆಗಳು ತೆರವು ಮಾಡಲಾಗಿದೆ.
ಇನ್ನು ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ತಹಶೀಲ್ದಾರ್ ಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.