ಭಾವತುಂಬಿ ಬರೆದವರು, ದೀಪಿಕೆಯನು ಕರೆದವರು ಶಿಶುಗೀತೆಯ ಹಾಡಿದವರು ಶರೀಫನ ನೆನದವರು; ಇಲ್ಲೇ ಇದ್ದವರು ಎಲ್ಲಿ ಎದ್ದು ಹೋದರು ನಮ್ಮ ಲಕ್ಷ್ಮಿನಾರಾಯಣ ಭಟ್ಟರು:

1 min read
N. S. Lakshminarayana Bhatta saakshatv

ಭಾವತುಂಬಿ ಬರೆದವರು, ದೀಪಿಕೆಯನು ಕರೆದವರು ಶಿಶುಗೀತೆಯ ಹಾಡಿದವರು ಶರೀಫನ ನೆನದವರು; ಇಲ್ಲೇ ಇದ್ದವರು ಎಲ್ಲಿ ಎದ್ದು ಹೋದರು ನಮ್ಮ ಲಕ್ಷ್ಮಿನಾರಾಯಣ ಭಟ್ಟರು:

“ಕನ್ನಡ ಸುಗಮ ಸಂಗೀತ ಕ್ಷೇತ್ರವನ್ನು ಸಿರಿವಂತಗೊಳಿಸಿದ ಸೂಕ್ಷ್ಮ ಮನಸಿನ ನಗುಮೊಗದ ಕವಿ ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟರ ನುಡಿನಮನ”

ಕತ್ತಲೆ ಎನ್ನುವುದು ಎಲ್ಲಿ ಇದೆ?
ಇರುವುದೆಲ್ಲ ಬೆಳಕು,
ರಾತ್ರಿಯೆನುವುದೇ ಬರಿಯ ಭ್ರಮೆ
ಅರಿವ ಕವಿದ ಮುಸುಕು.

N. S. Lakshminarayana Bhatta saakshatvಮನಸಿನಲ್ಲಿ ಕಲ್ಮಶಗಳಿಲ್ಲದ, ಎಲ್ಲರಲ್ಲೂ ಒಂದಾಗುವ, ಪ್ರೇಮಮಯಿ ಮೃದುಹೃದಯಿಗಳಿಗೆ ಮಾತ್ರ ಸದಾಕಾಲ ನಿಷ್ಕಲ್ಮಶವಾದ ಮಂದಸ್ಮಿತ ನಸುನಗೆ ಹರಿಸಲು ಸಾಧ್ಯ ಎಂದು ನನ್ನ ಗುರುಗಳು ಸದಾ ಹೇಳುತ್ತಿದ್ದರು. ಅಂತಹ ಒಬ್ಬ ವ್ಯಕ್ತಿ ಕನ್ನಡ ಸಾರಸ್ವತ ಲೋಕದ ಮಹೋನ್ನತ ಕವಿ ಎನ್.ಎಸ್‌ ಲಕ್ಷ್ಮಿನಾರಾಯಣ್‌ ಭಟ್ಟರು. ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೋಗ್ಗದವರಾದ ಭಟ್ಟರು ಕನ್ನಡ ಸಾಹಿತ್ಯ ಲೋಕದಲ್ಲಿ ಎನ್.ಎಸ್.ಎಲ್‌ ಎಂದೇ ಚಿರಪರಿಚಿತರು ಹಾಗೂ ನವ್ಯದ ಪ್ರತಿಭಾವಂತ ಕವಿ, ಅನುವಾದಕ, ನಾಟಕಕಾರ ಹಾಗೂ ವಿಮರ್ಷಕ. ತಮ್ಮ ೮೪ನೆಯ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ಬನಶಂಕರಿಯ ನಿವಾಸದಲ್ಲಿ ಇಹಲೋಕದ ವ್ಯಾಪಾರ ಮುಗಿಸಿದ ಲಕ್ಷ್ಮಿನಾರಾಯಣ ಭಟ್ಟರು ಕನ್ನಡದ ಕಾವ್ಯ ಪರಂಪರೆಯ ಅಮೂಲ್ಯ ಆಸ್ತಿಯಾಗಿದ್ದರು ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಎಲ್ಲರಿಗೂ ಸಲ್ಲುವ ಕವಿ ಎಂದೇ ಕರೆಸಿಕೊಳ್ಳುತ್ತಿದ್ದ ಲಕ್ಷ್ಮಿನಾರಾಯಣ ಭಟ್ಟರು, ಯಾವ ತಂಟೆ ತಕರಾರು ತಾಪತ್ರಯಗಳಿಗೂ ಹೋದವರಲ್ಲ, ಯಾವ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲ, ಯಾವ ಪಂಥ ಪಂಗಡಗಳಿಗೂ ತಮ್ಮನ್ನು ಸೀಮಿತಗೊಳಿಸಿಕೊಂಡವರಲ್ಲ, ಯಾರಿಗೂ ಪರಾಕ್‌ ಹೇಳಿದವರಲ್ಲ ಮತ್ತು ಯಾರನ್ನೂ ಮೆಚ್ಚಿಸಲೆಂದು ಬರೆದವರಲ್ಲ. ಮುಖ್ಯವಾಗಿ ಅವರು ಯಾರಿಗೂ ನಿಷ್ಟುರರಾಗದೇ ಅಜಾತಶತ್ರುವಾಗಿ ತುಂಬು ಜೀವನ ನಡೆಸಿದರು. ತಮ್ಮಿಡೀ ಜೀವನವನ್ನು ಅಧ್ಯಾಪನೆ ಮತ್ತು ಸಾಹಿತ್ಯ ಎಂಬೆರಡು ದೋಣಿಗಳ ಮೇಲೆಯೇ ಕಳೆದವರು ಎನ್ನೆಸ್ಸೆಲ್. ಕನ್ನಡದ ಮಟ್ಟಿಗೆ ಅವರ ಹೆಸರು ನೂರಾರು ಕಾಲ ಉಳಿಯುವಂತದ್ದು; ನೂರಾರು ಭಾವಗೀತೆಗಳಿಗೆ ಜೀವತುಂಬಿದ ಸೂಕ್ಷ್ಮ ಸಂವೇದನೆಯ ಕವಿ ಭಟ್ಟರು, ಕನ್ನಡದ ಸುಗಮ ಸಂಗೀತ ಕ್ಷೇತ್ರವನ್ನು ಇನ್ನಷ್ಟು ಮತ್ತಷ್ಟು ಶ್ರೀಮಂತಗೊಳಿಸಿದವರು.

ಮೋಜಿನೊಂದು ಜಾತ್ರೆಯೇ?
ಇರಂತರ ಯಾತ್ರೆಯೇ?
ಬಾಳು ಅನುಭವಕ್ಕೆ ತೆರೆದ
ಹಿರಿ ಅಕ್ಷಯ ಪಾತ್ರೆಯೇ?

ಕನ್ನಡ ಸಾಹಿತ್ಯದಲ್ಲಿ ಅನುಭಾವಿ ಮಹಮದೀಯ ತತ್ವಪದದ ಕವಿ ಶಿಶುನಾಳ ಶರೀಫರು ಉಳಿದುಕೊಂಡಿದ್ದರೇ ಅದಕ್ಕೆ ಕಾರಣ ಲಕ್ಷ್ಮಿನಾರಾಯಣ ಭಟ್ಟರು. ಅವರು ಶರೀಫರ ತತ್ವಪದಗಳ ಸಂಗ್ರಹವನ್ನು ಹುಡುಕಿ ಹುಡುಕಿ ಪ್ರಕಟಿಸದೇ ಇದ್ದಿದ್ದರೇ ನಾವು ಶರೀಫರನ್ನು ಸಂಪೂರ್ಣವಾಗಿ ಕಾಣಲು ಸಾಧ್ಯವೇ ಇರುತ್ತಿರಲಿಲ್ಲವೇನೋ? ಇಡೀ ಕರ್ನಾಟಕಕ್ಕೆ ಶರೀಫರ ಬದುಕು, ಚಿಂತನೆ, ತತ್ವಪದಗಳು, ಸಾಮಾಜಿಕ ದೃಷ್ಟಿಯನ್ನು ಪರಿಚಯಿಸಿದವರು ಲಕ್ಷ್ಮಿನಾರಾಯಣ ಭಟ್ಟರು. ಇವತ್ತಿಗೂ ಸಿ.ಅಶ್ವಥ್‌ ರ ಕಂಚಿನಕಂಠದಲ್ಲಿ ಶರೀಫರ ಗೀತೆಗಳನ್ನು ನಾವು ಕೇಳಿ ಆಸ್ವಾದಿಸುತ್ತೇವೆ ಎಂದರೆ ಭಟ್ಟರಿಗೊಂದು ಕೃತಜ್ಞತೆ ಸಲ್ಲಲೇಬೇಕು. ಅಶ್ವಥ್‌ ಅಷ್ಟೇ ಏಕೆ? ಶಿವಮೊಗ್ಗ ಸುಬ್ಬಣ್ಣ, ಮೈಸೂರು ಅನಂತಸ್ವಾಮಿ, ಗರ್ತೀಕೆರೆ ರಾಘಣ್ಣ, ರತ್ನಾಮಾಲ, ಸುಲೋಚನ ಮುಂತಾದ ಗಾಯಕರು ಪ್ರಸಿದ್ಧಿರಾಗಲು ಭಾವತುಂಬಿದ ಸಾಹಿತ್ಯ ನೀಡಿದ ಭಟ್ಟರು ಕಾರಣರಲ್ಲವೇ!

N. S. Lakshminarayana Bhatta saakshatvನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟರು ಜನಿಸಿದ್ದು, ಶಿವಮೊಗ್ಗೆಯಲ್ಲಿ ೧೯೩೬ರ ಅಕ್ಟೋಬರ ೨೯ ರಂದು. ಶಿವಮೊಗ್ಗದ ಬಿಬಿ ಸ್ಟ್ರೀಟ್‌ ನ ಶಿವರಾಮ ಭಟ್ಟರು ಮತ್ತು ಮೂಕಾಂಬಿಕೆ ದಂಪತಿಗಳ ಪುತ್ರನಾಗಿ. ಸಾಮಾನ್ಯ ಬಡ ಕುಟುಂಬದ ಹಿನ್ನೆಲೆ ಎನ್ನೆಸ್ಸೆಲ್‌, ವಾರಾನ್ನ ಮಾಡಿಕೊಂಡು ಕಲಿತವರು. ಇಂಟರ್‌ ಮೀಡಿಯೆಟ್‌ ವರೆಗಿನ ಶಿಕ್ಷಣ ಶಿವಮೊಗ್ಗದಲ್ಲಾದರೇ ಆನಂತರ ಮೈಸೂರಿನಲ್ಲಿ ಕಷ್ಟಪಟ್ಟು ಕಲಿತು ಬಿಎ ಆನರ್ಸ್‌ ಮತ್ತು ಎಂಎ ಪದವಿ ಪಡೆದುಕೊಂಡರು. ಅವರಲ್ಲಿ ಕಲಿಕೆಯ ಶ್ರದ್ಧೆ ಎಷ್ಟಿತ್ತೆಂದರೇ, ಬಿಎಎಲ್ಲಿ ಮೊದಲ ರ್ಯಾಂಕ್‌ ಮತ್ತು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂಎನಲ್ಲಿ ಎರಡನೇ ರ್ಯಾಂಕ್‌ ನಲ್ಲಿ ತೇರ್ಗಡೆ ಹೊಂದಿದರು. ಬಳಿಕ ತೀ.ನಂ ಶ್ರೀಕಂಠಯ್ಯನವರ ಮಾರ್ಗದರ್ಶನದಲ್ಲಿ ಭಾಷಾ ಶಾಸ್ತ್ರದ ಸಂಶೋಧಕರಾದರು. ಬಳಿಕ ಆಚಾರ್ಯ ಪಾಠಶಾಲೆಯಲ್ಲಿ ಅಧ್ಯಾಪಕರಾದರು. ಅವರು ಕನ್ನಡ ಸಾಹಿತ್ಯ, ವ್ಯಾಕರಣ ಛಂದಸ್ಸುಗಳನ್ನು ಬೋಧಿಸುವ ಶೈಲಿ ಸಾಕಷ್ಟು ಪ್ರಸಿದ್ಧವಾಗಿತ್ತು. ಅವರ ಶಿಷ್ಯರೆಲ್ಲರನ್ನೂ ಭಟ್ಟರ ಹಾವ ಭಾವ, ನಿರಂಕಾರ ವಿನಯವಂತಿಕೆಯ ನಡೆನುಡಿಗಳು ಇನ್ನಿಲ್ಲದಂತೆ ಪ್ರೇರೇಪಿಸಿದ್ದವು. ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ಅಧ್ಯಾಪಕರಾದರು, ೧೯೮೫ರಲ್ಲಿ ಪ್ರಾಧ್ಯಾಪಕ ಹುದ್ದೆಗೆ ಭಡ್ತಿಯಾದ ಭಟ್ಟರು ೧೯೮೬ರಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಆದರು. ೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆಗಿ ಕೆಲ ಕಾಲ ಕೆಲಸ ಮಾಡಿ ನಿವೃತ್ತಿ ಹೊಂದಿದರು. ವೃತ್ತಿಯಲ್ಲಿ ಅಧ್ಯಾಪಕ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದ ಭಟ್ಟರ ಸಾಹಿತ್ಯ ವಲಯವೂ ದೊಡ್ಡದೇ. ಅಡಿಗರು, ನಾಡಿಗರು, ಜಿ.ಎಸ್‌ ಶಿವರುದ್ರಪ್ಪ ಮುಂತಾದವರ ಆತ್ಮೀಯವಲಯದಲ್ಲಿ ಗುರುತಿಸಿಕೊಂಡಿದ್ದ ಭಟ್ಟರು ಬಿ.ಆರ್‌ ಲಕ್ಷ್ಮಣ್‌ ರಾವ್‌, ಹೆಚ್.ಎಸ್‌ ವೆಂಕಟೇಶ ಮೂರ್ತಿ, ಕೆ.ಎಸ್ ನಿಸಾರ್‌ ಅಹ್ಮದ್‌ ಮುಂತಾದವರೊಡನೆ ಸಾಹಿತ್ಯ ಸಲ್ಲಾಪದಲ್ಲಿ ತೊಡಗಿದ್ದವರು.

ಯಾರು,ಏನು, ಯಾತಕ್ಕೆ,
ತಿಳಿಸದ ಮಾಯಾವ್ಯೂಹಕ್ಕೆ
ಎಲ್ಲಿದೆ ಆದಿ ಅಂತ್ಯಗಳು
ಉತ್ತರ ಸಿಗದಾ ಗೂಢಕ್ಕೆ?

ಭಟ್ಟರು ನವ್ಯದ ಕಾವ್ಯ ಶೈಲಿಯಲ್ಲಿ ಅಸಂಖ್ಯ ಭಾವಗೀತೆಗಳನ್ನು ಬರೆದರು, ಬಾಳ ಒಳ್ಳೇವ್ರ್ ನಮ್ ಮಿಸ್ಸು’ ಹಾಗೂ ‘ ಗೇರ್ ಗೇರ್ ಮಂಗಣ್ಣ’ ಮುಂತಾದ ಶಿಶುಗೀತೆಗಳನ್ನು ಬರೆದರು. ಮಕ್ಕಳಿಗೆಂದೇ ಪದ್ಯ, ನಾಟಕಗಳನ್ನು ಬರೆದರು. ಸಾಹಿತ್ಯ ವಿಮರ್ಶೆ, ಅನುವಾದ, ನಾಟಕಗಳನ್ನು ರಚಿಸಿದರು. ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದರು. ಭಟ್ಟರ ಹೆಸರನ್ನು ಚಿರಸ್ಥಾಯಿಯಾಗಿಸುವ ಇನ್ನೊಂದು ಆಯಾಮವೇ ಅವರ ಅನುವಾದಗಳು. ವಿಲಿಯಂ ಶೇಕ್ಸ್‌ ಪಿಯರ್‌, ಎಲಿಯಟ್‌, ವಿಲಿಯಂ ಬಟ್ಲರ್‌ ಯೇಟ್ಸ್‌ ರಂತಹ ಮಹಾನ್‌ ಪಾಶ್ಚಿಮಾತ್ಯ ಸಾಹಿತಿಗಳ ರಚನೆಯನ್ನು ಕನ್ನಡಕ್ಕೆ ತುರ್ಜುಮೆ ಮಾಡಿದರು. ಇವರ ಶೇಕ್ಸ್‌ ಪಿಯರ್‌ ಸಾನೆಟ್‌ ಸುನೀತ’ (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು) ಮತ್ತು ‘ಚಿನ್ನದ ಹಕ್ಕಿ’ ( ಯೇಟ್ಸ ಕವಿಯ ಐವತ್ತು ಕವನಗಳು)ಗಳಂತೂ ಜಿ.ಎಸ್‌ ಅಮೂರರು ಹೇಳುವ ಪ್ರಕಾರ ಕನ್ನಡ ಸಾಹಿತ್ಯದ ಪಾಲಿನ ವರ. ಇದಕ್ಕಿಂತ ಅತ್ಯುತ್ತಮವಾಗಿ ಅನುವಾದ ಮಾಡಲು ಸಾಧ್ಯವೇ ಇಲ್ಲ ಎಂದು ಸ್ವತಃ ಅಡಿಗರೇ ಈ ಕೃತಿಗಳಿಗೆ ಮೊಹರು ಒತ್ತಿದ್ದರು. ಭಟ್ಟರ ಜಗನ್ನಾಥ ವಿಜಯ, ಮುದ್ರಾಮಂಜೂಷ, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ, ಟ್ವೆಲ್ಫ್ತ್ ನೈಟ್ ಮುಂತಾದವುಗಳ ಗಟ್ಟಿತನವೇ ಅವರ ಸಾಹಿತ್ಯ ಕೃಷಿಯ ಶ್ರೇಷ್ಟತೆ ಮತ್ತು ಸಾರ್ಥಕತೆ. ಕನ್ನಡ ಸಾಹಿತ್ಯದ ಅತ್ಯಂತ ಸಮರ್ಥ ಅನುವಾದಕರಾಗಿದ್ದ ಭಟ್ಟರು ಯೇಟ್ಸ್, ಶೇಕ್ಸ್ ಪಿಯರ್, ಎಲಿಯಟ್ ಅನುವಾದಗಳಿಗಾಗಿ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಭಾಜನರಾಗಿದ್ದರು.

N. S. Lakshminarayana Bhatta  saakshatvವೃತ್ತ, ಸುಳಿ, ಚಿತ್ರಕೂಟ, ಬೇಲಿಯಾಚೆಯ ಹೂವು, ದೀಪಿಕಾ, ಭಾವಸಂಗಮ, ನೀಲಾಂಜನ ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಪಾಂಚಾಲಿ, ಬಂದೆ ಬರತಾವ ಕಾಲ, ಅರುಣ ಗೀತೆ, ಊರ ಹೊರಗೆ, ಬಿಡುಗಡೆ, ನಡೆದಿದೆ ಪೂಜಾರತಿ. ಇದಲ್ಲ ತಕ್ಕ ಗಳಿಗೆ, ಅವತಾರ, ಹಿರಿಯರು, ಕೃತಜ್ಞತೆ, ಪ್ರೀತಿ, ಸವಾರಿ, ಸೀಮಂತಿನಿ, ಮಗನಿಗೊಂದು ಪತ್ರ, ಇವುಗಳು ಲಕ್ಷ್ಮಿನಾರಾಯಣ ಭಟ್ಟರ ಪ್ರಮುಖ ಕಾವ್ಯ ಕೃತಿಗಳು. ಕಾವ್ಯಪ್ರತಿಮೆ, ನಂದನ ಕಿಶೋರಿ, ನಿನ್ನೆಗೆ ನನ್ನ ಮಾತು, ಹೊಳೆ ಸಾಲಿನ ಮರ, ಊರ್ವಶಿ ಗೀತ ನಾಟಕ, ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ, ಮಹಾಭಾರತದ ಪಾತ್ರಗಳಾದ ಕುಂತಿ ಮತ್ತು ಕರ್ಣ, ಸಂಕ್ಷಿಪ್ತ ಕನ್ನಡ ಛಂದಸ್ಸು, ಮುಂತಾದ ಭಟ್ಟರ ಲೇಖನಿಯಿಂದ ಹೊರಹೊಮ್ಮಿದ ಕೃತಿಗಳು ಕನ್ನಡ ಸಾರಸ್ವತಲೋಕವನ್ನು ಸಿರಿವಂತಗೊಳಿಸಿವೆ. ಕರ್ನಾಟಕದಲ್ಲಿ ಅತಿ ಜನಪ್ರಿಯತೆ ಪಡೆದುಕೊಂಡ ಭಟ್ಟರ ಕೃತಿ ಶಿಶುನಾಳ ಶರೀಫರ ಗೀತೆಗಳ ಸಂಗ್ರಹ. ಕಲ್ಲುಸಕ್ಕರೆ ಕೊಳ್ಳಿರೋ, ಧ್ರುವಚರಿತೆ, ಹೊರಳು ದಾರಿಯಲ್ಲಿ ಭಟ್ಟರ ಕಥನ ಕವನಗಳು. ಭಟ್ಟರ ಅನುವಾದಿತ ಕೃತಿಗಳಾದ ಠಾಕೂರರ ಎರಡು ನಾಟಕಗಳು, ಭಾರತೀಯ ಗ್ರಂಥ ಸಂಪಾದನಾ ಪರಿಚಯ, ವಿಮರ್ಷಾ ಕೃತಿಯಾದ ಕಾವ್ಯ ವಿಮೂಚನೆ, ಕಾವ್ಯ ಶೋಧನ, ಪ್ರಾಯೋಗಿಕ ವಿಮರ್ಷೆ ಕನ್ನಡ ಸಾಹಿತ್ಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ ಕೃತಿಗಳು. ನಿಲುವುಗನ್ನಡಿಯ ಮುಂದೆ ಎಂಬುದು ಲಕ್ಷ್ಮಿನಾರಾಯಣ ಭಟ್ಟರ ಆತ್ಮಚರಿತ್ರೆ.

ಭಟ್ಟರ ಸಾಹಿತ್ಯ ವ್ಯವಸಾಯಕ್ಕೆ ಅರಸಿಬಂದ ಗೌರವಗಳೇನು ಕಡಿಮೆಯೇನಲ್ಲ. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎನ್.ಸಿ.ಇ.ಆರ್.ಟಿ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ, ಶಿವರಾಮ ಕಾರಂತ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿಗಳಂತ ಸಮ್ಮಾನ ಅವರದ್ದಾಗಿದೆ. ೨೦೧೪ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಅವರದ್ದಾಗಿತ್ತು.

ಯಾರು ಬೆಳಕ ಸುರಿದರು
ನದಿಗಳನ್ನು ತೆರೆದರು?
ಆಕಾಶದ ಹಾಳೆಯಲ್ಲಿ
ತಾರೆಗಳನು ಬರೆದರು?

ಕನ್ನಡದ ಭಾವಗೀತೆಗಳನ್ನು ಆಸ್ವಾದಿಸುವವರು ಭಟ್ಟರು ಬರೆದ ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ, ಎಲ್ಲಿ ಜಾರಿತೋ ಮನವು, ಎಲ್ಲ ನಿನ್ನ ಲೀಲೆ ತಾಯೆ, ನನ್ನ ಇನಿಯನ ನೆಲೆಯ, ಈ ಬಾನು ಈ ಚುಕ್ಕಿ, ಮಲಗು ಮಲಗೆನ್ನ ಮರಿಯೇ, ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ, ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ, ಬಾರೆ ನನ್ನ ದೀಪಿಕಾ, ಮುಂತಾದ ಅದ್ಭುತ ಅನನ್ಯ ಹಾಡುಗಳನ್ನು ಮರೆಯಲು ಸಾಧ್ಯವೇ? ಭಟ್ಟರ ಭಾವಗೀತೆಗಳ ಕ್ಯಾಸೆಟ್‌ ಕೇಳಿ ಬೆಳೆದ ನಮ್ಮ ತಲೆಮಾರಿನ ಅಸಂಖ್ಯ ಮಂದಿಯ ಬಾಲ್ಯ ಮತ್ತು ತಾರುಣ್ಯದ ನೆನಪಿನಲ್ಲಿ ಲಕ್ಷ್ಮಿನಾರಾಯಣ ಭಟ್ಟರ ಕವಿತೆಗಳಿಗೆ ವಿಶೇಷವಾದ ಸ್ಥಾನ ಖಂಡಿತಾ ಇದೆ.

ಕನ್ನಡ ಸಾಹಿತ್ಯ ನೂರಾರು ತಾರೆಗಳಲ್ಲಿ ಒಬ್ಬರಂತಿದ್ದ ಲಕ್ಷ್ಮಿನಾರಾಯಣ ಭಟ್ಟರು ನಿಜಾರ್ಥದಲ್ಲಿ ಕಾವ್ಯಸಂತ. ತುಂಬು ಬದುಕು ಬಾಳಿದ ಭಟ್ಟರು ತಮ್ಮ ಭಾವಗೀತೆಗಳ ಮೂಲಕ, ಶಿಶುಗೀತೆಗಳ ಮುಖೇನ, ಅನುವಾದಗಳ ಸಂಗಡ ಸದಾ ನಮ್ಮ ನಡುವೆ ಬದುಕಿರುತ್ತಾರೆ. ಅವರ ದೈಹಿಕ ಕಾಯಕ್ಕಷ್ಟೇ ವಿಮೂಚನೆ, ಅವರ ಸಾಹಿತ್ಯದ ಆತ್ಮ ಇಲ್ಲೇ ನಮ್ಮ ಸುತ್ತಮುತ್ತ ಸದಾ ಜೀವಂತವಾಗಿರುತ್ತದೆ.

ವಿಶ್ವಾಸ್‌ ಭಾರದ್ವಾಜ್‌ (ವಿಭಾ)
*

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd