ಬೆಂಗಳೂರು: ದೇಶಾದ್ಯಂತ ಡಿಜಿಟಲ್ ಮನರಂಜನಾ ಲೋಕದಲ್ಲಿ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸಹಜ ಹಾಸ್ಯ ಮತ್ತು ನಟನೆಯ ಮೂಲಕ ಗಮನ ಸೆಳೆದಿರುವ ಖ್ಯಾತ ನಟ ಹಾಗೂ ಸ್ಟ್ಯಾಂಡಪ್ ಕಾಮಿಡಿಯನ್ ನಮನ್ ಅರೋರಾ ಇದೀಗ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ವಿಶಿಷ್ಟ ಕಥಾಹಂದರ ಹೊಂದಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಮೂಲಕ ಅವರು ಚಂದನವನಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದು, ಸ್ಯಾಂಡಲ್ವುಡ್ ಪ್ರೇಕ್ಷಕರನ್ನು ರಂಜಿಸಲು ಹೊಸ ಅವತಾರದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಸ್ಟ್ಯಾಂಡಪ್ ಕಾಮಿಡಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಸಕ್ರಿಯರಾಗಿದ್ದ ನಮನ್ ಅರೋರಾ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟಿದ್ದು ಸಮಯ್ ರೈನಾ ನಿರೂಪಣೆಯ ಜನಪ್ರಿಯ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ. ಈ ವೇದಿಕೆಯಲ್ಲಿ ಅವರ ಅದ್ಭುತ ಕಾಮಿಕ್ ಟೈಮಿಂಗ್, ಪ್ರಬುದ್ಧ ಅಭಿನಯ ಹಾಗೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಶೋ ನೀಡಿದ ಜನಪ್ರಿಯತೆಯಿಂದಾಗಿ ಡಿಜಿಟಲ್ ಮನರಂಜನಾ ಜಗತ್ತಿನಲ್ಲಿ ಅವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು.
ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗದೆ ಹಿರಿತೆರೆ ಹಾಗೂ ಒಟಿಟಿ ಜಗತ್ತಿನಲ್ಲೂ ನಮನ್ ತಮ್ಮ ಛಾಪು ಮೂಡಿಸಿದ್ದಾರೆ. 2022ರಲ್ಲಿ ತೆರೆಕಂಡ ಬಾಲಿವುಡ್ನ ಹಿಟ್ ಚಿತ್ರ ‘ಜುಗ್ ಜುಗ್ ಜೀಯೋ’, 2024ರ ‘ಮಿಸ್ಟರ್ & ಮಿಸೆಸ್ ಮಹಿ’ ಹಾಗೂ ಪ್ರಸಿದ್ಧ ವೆಬ್ ಸರಣಿ ‘ಕಾಲ್ ಮಿ ಬೇ’ ಸೇರಿದಂತೆ ಹಲವು ಪ್ರಮುಖ ಪ್ರಾಜೆಕ್ಟ್ಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ದೂರದರ್ಶನ ಮತ್ತು ಸಿನಿಮಾಗಳೆರಡರಲ್ಲೂ ಪಳಗಿರುವ ಅವರಿಗೆ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ತಲುಪುವ ಕಲೆ ಸಿದ್ಧಿಸಿದೆ.
ಇದೀಗ ಪ್ರಾದೇಶಿಕ ಚಿತ್ರರಂಗದತ್ತ ಮುಖ ಮಾಡಿರುವ ನಮನ್ ಅರೋರಾ, ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಹೊಸ ಸವಾಲನ್ನು ಎದುರಿಸಲು ಸಿದ್ಧರಾಗಿದ್ದಾರೆ. ವಿಭಿನ್ನ ಭಾಷೆ, ಹೊಸ ವಾತಾವರಣ ಹಾಗೂ ಹೊಸ ಪ್ರೇಕ್ಷಕರ ಎದುರು ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಲು ಹೊರಟಿರುವ ಅವರ ಈ ಹೊಸ ಹೆಜ್ಜೆ ಚಂದನವನದಲ್ಲೂ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ‘ಬೆಲ್ ಬಾಟಂ’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ತಯಾರಾಗಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರಕ್ಕೆ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್-ಕಟ್ ಹೇಳಿದ್ದಾರೆ.







