Namma metro : ಒಂದೇ ಟಿಕೆಟ್ 6 ಮಂದಿ ಪ್ರಯಾಣ – ನಮ್ಮ ಮೆಟ್ರೋದಿಂದ ನೂತನ ಯೋಜನೆ
ಪ್ರಯಾಣಿಕರನ್ನು ಆಕರ್ಷಿಸಲು ‘ನಮ್ಮ ಮೆಟ್ರೋ’ ಹೊಸ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ. ಒಂದೇ ಟಿಕೆಟ್ ನಲ್ಲಿ 6 ಮಂದಿ ಪ್ರಯಾಣಿಸುವ ವಿನೂತನ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.
ಬಿಎಂಆರ್ಸಿಎಲ್, ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯ ಮೂಲಕ ಈ ಯೋಜನೆ ಜಾರಿಗೆ ತರುತ್ತಿದೆ.
ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಒಂದು ಕ್ಯೂ ಆರ್ ಕೋಡ್ ಬಳಸಿ ಗರಿಷ್ಠ ಆರು ಮಂದಿ ಪ್ರಯಾಣಿಸಬಹುದಾದ ನೂತನ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ನಮ್ಮ ಮೆಟ್ರೋದಲ್ಲಿ ಜನವರಿ 15ರೊಳಗೆ ಸಾರ್ವಜನಿಕರ ಬಳಕೆಗೆ ಈ ಸೇವೆ ಜಾರಿಗೆ ಬರುವ ನಿರೀಕ್ಷೆಯಿದ್ದು, ಇದರಿಂದಾಗಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಟಿಕೆಟ್ ಕೊಳ್ಳುವ ಪ್ರಮೇಯ ತಪ್ಪುತ್ತದೆ.
ಈಗ ಕ್ಯೂಆರ್ ಕೋಡ್ ಬಳಸಿ ಒಬ್ಬರು ಮಾತ್ರ ಪ್ರಯಾಣಿಸಬಹುದಾಗಿದ್ದು, ಈ ವ್ಯವಸ್ಥೆಯು ನವೆಂಬರ್ 1 ರಂದು ಆರಂಭವಾಗಿದೆ. ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆಯು ಕಡಿಮೆ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.