Nandini Milk : ಹಾಲಿನ ದರ ಏರಿಕೆ – ಎರಡು ದಿನಗಳೊಳಗೆ ಕೆಎಂಎಫ್ (KMF) ನಿರ್ಧಾರ
ಸೋಮವಾರ ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿದ್ದ ಕೆಎಂಎಫ್ ಮತ್ತು ಅಧಿಕಾರಿಗಳ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಸಭೆಯಲ್ಲಿ ಸಿಎಂ ಬೊಮ್ಮಾಯಿ ರಾಜ್ಯದಲ್ಲಿನ ಹಾಲಿನ ದರ ಹಾಗೂ ಇತರೆ ರಾಜ್ಯಗಳಲ್ಲಿನ ದರ ಮತ್ತು ಉತ್ಪಾದನಾ ವೆಚ್ಚದ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಹಾಲಿನ ದರವನ್ನು 3₹ ಹೆಚ್ಚಿಸುವ ಬದಲು ರೈತರಿಗೆ ನಷ್ಟವಾಗದಂತೆ, ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳದಂತೆ, ಸಂಸ್ಥೆಗೆ ನಷ್ಟವಾಗದಂತಹ ಒಂದು ಸಿದ್ದ ಸೂತ್ರದೊಂದಿಗೆ ಬನ್ನಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಹಾಲು ಮಹಾಮಂಡಲದ ಆಡಳಿತ ಮಂಡಳಿ ಇನ್ನು ಎರಡು ದಿನಗಳಲ್ಲಿ ಹಾಲಿನ ದರಕ್ಕೆ ಸಂಬಂಧಿಸಿ ಸಭೆ ನಡೆಸಲಿದೆ ಎಂದು ಕೆಎಂಎಫ್ ಮೂಲಗಳು ಹೇಳಿದ್ದು, ಅಲ್ಲಿಯವರೆಗೆ ಹಾಲಿನ ದರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

ಈ ಮೊದಲು ಲೀಟರ್ಗೆ 3 ರೂ.ಹೆಚ್ಚಳ ಮಾಡಲು ಕೆಎಂಎಫ್ ನಿರ್ಧಾರ ಮಾಡಿತ್ತು. 2017ರ ನಂತರ ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆ ಆಗಿಲ್ಲ. ಹಾಗಾಗಿ 2 ರೂ.ನಿಂದ 5ರೂವರೆಗೆ ಏರಿಕೆಗೆ ಪ್ರಸ್ತಾಪ ಇಟ್ಟಿತ್ತು. ಕಳೆದ 5 ವರ್ಷಗಳಿಂದ ಚಿಲ್ಲಿಂಗ್, ಸಾಗಣೆ, ಉತ್ಪಾದನಾ ವೆಚ್ಚ ಏರಿಕೆಯಾಗಿದ್ದು, ನಂದಿನಿ ಹಾಲಿಗೂ, ಖಾಸಗಿ ಹಾಲಿನ ದರಕ್ಕೂ ವ್ಯತ್ಯಾಸ ಇದೆ. ಆದುದರಿಂದ ಕೆಎಂಎಫ್ ಹಾಲಿನ ದರವನ್ನು 3ರೂ ಏರಿಕೆ ಮಾಡಲು ಒಕ್ಕೂಟಗಳು ನಿರ್ಧಾರ ಮಾಡಿದ್ದವು.
ಇದೀಗ ರೈತರು ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಪ್ರತಿ ಲೀಟರ್ ಗೆ 3ರೂ ಬದಲು 2ರೂ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಎರಡು ದಿನಗಳಲ್ಲಿ ಹಾಲಿನ ದರ ಏರಿಕೆಗೆ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.
nandini-milk-milk-price-hike-kmf-decision-within-two-days