ಪಾಟ್ನಾ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ತನ್ನ ಕಂಬಂಧ ಬಾಹುಗಳನ್ನು ಕ್ಷಿಪ್ರಗತಿಯಲ್ಲಿ ಚಾಚುತ್ತಾ ಸಾಗಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿದಾಟಿದೆ.
ಈ ಮಧ್ಯೆ ಹೊರಗಿನಿಂದ ಬಂದವರನ್ನು, ಸೋಂಕಿತರ ಸಂಪರ್ಕದಲ್ಲಿವರನ್ನು ಅಧಿಕಾರಿಗಳು ಕ್ವಾರಂಟೈನ್ ಮಾಡುತ್ತಿದ್ದಾರೆ. ಈಗಾಗಲೇ ಪ್ರತಿ ರಾಜ್ಯದಲ್ಲಿ ಸಾವಿರಗಟ್ಟಲೇ ಜನರನ್ನು ಅಧಿಕಾರಿಗಳು ಕ್ವಾರಂಟೈನ್ ಮಾಡುತ್ತಿದ್ದಾರೆ.
ಆದ್ರೆ ಅಲ್ಲಲ್ಲಿ ಕ್ವಾರಂಟೈನ್ ವಿಚಾರವಾಗಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಪ್ರಕರಣಗಳು ವರದಿ ಆಗುತ್ತಲೇ ಇವೆ. ಏತನ್ಮಧ್ಯೆ ಕ್ವಾರಂಟೈನ್ ಕೇಂದ್ರದಲ್ಲಿ ಅಶ್ಲೀಲ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಹಾರದ ಸಮಸ್ತಪುರ ಜಿಲ್ಲೆಯ ವಿಭೂತಿಪುರ ಕ್ಷೇತ್ರದ ಮಧ್ಯ ವಿದ್ಯಾಲಯದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಪ್ರವಾಸಿ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಕ್ವಾರಂಟೈನ್ ನಲ್ಲಿರುವವರು ಇಲ್ಲಿಗೆ ಸೌಂಡ್ ಸಿಸ್ಟಂ ತಂದು ಹೊರಗಿನಿಂದ ಯುವತಿಯರನ್ನು ಕರೆಸಿ ಅಶ್ಲೀಲ ಹಾಡುಗಳಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ಶಾಲೆಯ ಆವರಣದಲ್ಲಿಯೇ ಈ ನಂಗಾನಾಚ್ ಕಾರ್ಯಕ್ರಮ ನಡೆದಿದೆ. ಡ್ಯಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದ್ದು, ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಕೂಡ ಈ ಬಗ್ಗೆ ಭಾರಿ ಚರ್ಚೆಗಳಾಗುತ್ತಿವೆ. ಅಲ್ಲದೆ ಹಲವರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಡಿಷನಲ್ ಕಲೆಕ್ಟರ್, ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜನೆಯ ಮಾಹಿತಿ ಲಭ್ಯವಾಗಿದೆ. ಕ್ವಾರಂಟೈನ್ ಕೇಂದ್ರಕ್ಕೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ನೀಡಿಲ್ಲ. ಕ್ವಾರಂಟೈನ್ ನಲ್ಲಿರೋರ ಮನೋರಂಜನೆಗಾಗಿ ಟಿವಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಕೊರೊನಾ ರೌದ್ರತರ್ನಕ್ಕೆ ಈವರೆಗೆ 3,303 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 5,611 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 140 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನು ಈವರೆಗೆ ಭಾರತದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು 42,309 ಮಂದಿ ಗುಣಮುಖರಾಗಿದ್ದಾರೆ. 61,194 ಸೋಂಕಿತರು ಇನ್ನೂ ಕೊರೊನಾದಿಂದ ಬಳಲುತ್ತಿದ್ದಾರೆ.
ಇನ್ನು ಕೊರೊನಾ ತಡೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾನಾ ಕಸರತ್ತುಗಳನ್ನು ನಡೆಸುತ್ತಿವೆ. ಸೋಂಕಿತರು ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡುತ್ತಿದೆ. ಸರ್ಕಾರವೇ ಕ್ವಾರಂಟೈನ್ ವೆಚ್ಚವನ್ನು ಭರಿಸುತ್ತಿದ್ದು, ಕೆಲ ಕೊರೊನಾ ಶಂಕಿತರು ಮಾತ್ರ ತಮಗೆ ಏನು ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.